

ಗುರುಗುಂಟಾ: ಗ್ರಾಮದಲ್ಲಿ ಹತ್ತು ದಿನಗಳ ಕಾಲ ವೈಭವದಿಂದ ಜರುಗಿದ ಮೊಹರಂ ಹಬ್ಬ ಶನಿವಾರ ಪೀರಲು ದೇವರ ದಫನ್‌ನೊಂದಿಗೆ ಸಂಪನ್ನಗೊಂಡಿತು.
ಯುವಕರು, ಜನರು ಮಸೀದಿ ಮುಂಭಾಗ ಕುಣಿತದೊಂದಿಗೆ ಅಲಾಯಿ ಹೆಜ್ಜೆ ಹಾಕಿ ಸಂಭ್ರಮಿಸಿದರು. ಗ್ರಾಮ ತೊರೆದು ಬೇರೆಡೆ ತೆರಳಿದ್ದ ನೂರಾರು ಸಂಖ್ಯೆಯ ಭಕ್ತರು ಮರಳಿ ಬಂದು, ವಾಡಿಕೆಯಂತೆ ಎಲ್ಲ ದೇವರುಗಳಿಗೆ ಲೋಬಾನ ಹಾಕಿ ನಮಸ್ಕರಿಸಿದರು.
ಎಲ್ಲ ಪೀರಲ ದೇವರಗಳನ್ನು ಮುಖ್ಯಬೀದಿ, ಸಂತೆ ಮಾರುಕಟ್ಟೆ, ಮರಾಠ ಓಣಿ, ಮೋಮಿನ ಓಣಿ, ಮೂಡಲಗಸಿ ಮುಖಾಂತರ ರಾಷ್ಟ್ರೀಯ ಹೆದ್ದಾರಿಯ ಬಳಿಯ ಕೆರೆವರೆಗೆ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯಲ್ಲಿ ವೈವಿಧ್ಯಮಯ ಸಿಡಿ ಮದ್ದುಗಳನ್ನು ಸಿಡಿಸಲಾಯಿತು. ನಂತರ ಕೆರೆಯಲ್ಲಿ ಪೀರಲ ದೇವರಗಳ ದಫನ್ ಮಾಡಲಾಯಿತು.
ಗ್ರಾಮದಲ್ಲಿ ಒಟ್ಟು 12 ಪೀರಲ ದೇವರುಗಳನ್ನು ಪ್ರತಿಸ್ಥಾಪಿಸಲಾಗಿತ್ತು. ಅದರಲ್ಲಿ ಕುಂಟ ಬಂದಾವಲ್ಲಿ, ಅಬ್ಬಾಸಲಿ, ಬೆಂಚಲದೊಡ್ಡಿ ಲಾಲಾಸಾಬ್, ಮೌಲಾಲಿ ನಾಲ್ಕು ಪೀರಲ ದೇವರಗಳನ್ನು ದಫನ್ ಮಾಡಲಿಲ್ಲ. ಉಳಿದ ಪೀರಲ ದೇವರಗಳಾದ ಗದ್ದೆಸಾಬ್, ಹಸನ್-ಹುಸೇನ್, ಹುಸೇನ್ ಪಾಶಾ, ಮೆಕ್ಕಿ ಹುಸೇನ್, ಚೋಪ್ದಾರ್ ಲಾಲ್ ಸಾಬ್, ಹಳ್ಳದ ಲಾಲಸಾಬ್, ಸೈಯದ್ ಕಾಶಿಂ, ಬಾರೋ ಮಾಮ್ ದಫನ್ ಮಾಡಲಾಯಿತು.