

ಯಳಂದೂರು: ಯಳಂದೂರು ತಾಲೂಕಿನಾದ್ಯಂತ ತ್ಯಾಗ ಹಾಗೂ ಬಲಿದಾನಗಳ ಸಂಕೇತವಾದ ಮೊಹರಂ ಹಬ್ಬವನ್ನು ಭಾನುವಾರ ಸಂಭ್ರಮ ಸಡಗರದಿಂದ ಮುಸ್ಲಿಮರು ಆಚರಿಸಿದರು.
ಪ್ರವಾದಿ ಪೈಗಂಬರರ ಮೊಮ್ಮಕ್ಕಳು ಹಾಗೂ ಇವರ ಸಂಗಡಿಗರು ಯುದ್ಧಭೂಮಿಯಲ್ಲಿ ಹೋರಾಡಿ ಮಡಿದ ಸಂಕೇತವಾಗಿ ಈ ಹಬ್ಬವನ್ನು ಆಚರಿಸುವ ವಾಡಿಕೆ ಇಸ್ಲಾಂನಲ್ಲಿದೆ. ಇದರಲ್ಲಿ ಅವರ ತ್ಯಾಗ, ಬಲಿದಾನಗಳ ಸಂಕೇತವೆಂಬಂತೆ ಆಯಾಯ ಪ್ರದೇಶಗಳಲ್ಲಿ ವಿಭಿನ್ನವಾಗಿ ಆಚರಿಸುವ ವಾಡಿಕೆ ಇದೆ. ಇದರ ನೆನಪಾಗಿ ಸಿಹಿಅನ್ನ, ಷರಬತ್ತುಗಳನ್ನು ವಿತರಿಸುವ ಸಂಪ್ರದಾಯ ಹಲವೆಡೆ ಇದೆ. ಇದರೊಂದಿಗೆ ಅದ್ದೂರಿ ಮೆರವಣಿಗೆ, ದೇಹದಂಡನೆ ಮಾಡಿಕೊಳ್ಳುವ ಪರಿಪಾಠವೂ ಇದೆ. ಈ ಹಿನ್ನೆಲೆಯಲ್ಲಿ ರೂಪುಗೊಂಡ ಈ ಹಬ್ಬವನ್ನು ಆಚರಿಸಲಾಯಿತು.
ಯಳಂದೂರು ಪಟ್ಟಣದ ಜಾಮೀಯಾ ಮಸೀದಿಯಲ್ಲಿ ಶನಿವಾರ ರಾತ್ರಿ ಹಬ್ಬದ ಮಹತ್ವವನ್ನು ಸಾರುವ ವಿಶೇಷ ಪ್ರವಚನವನ್ನು ಧರ್ಮಗುರು ಅಬ್ರಾರ್ ಅಹಮ್ಮದ್ ನೀಡಿದರು. ಮಾಂಬಳ್ಳಿ ಗ್ರಾಮದಲ್ಲೂ ಹಬ್ಬದ ಸಂಭ್ರಮ ಮುಗಿಲುಮುಟ್ಟಿತ್ತು.
ತಾಲೂಕಿನ ಗುಂಬಳ್ಳಿ ಗ್ರಾಮದಲ್ಲಿ ಪಂಜಾಗಳನ್ನು ವಿಶೇಷ ಹೂವಿನ ಮೂಲಕ ಅಲಂಕರಿಸಿ ಪ್ರಾರ್ಥನೆ ಮಾಡಲಾಯಿತು. ಹಿಂದುಗಳು ಇದರ ದರ್ಶನ ಪಡೆಯುತ್ತಿದ್ದ ದೃಶ್ಯ ಭಾವೈಕ್ಯತೆಯ ಸಂಕೇತದಂತಿತ್ತು. ಇದಾದ ನಂತರ ನೆರೆದಿದ್ದ ಭಕ್ತರಿಗೆ ಅನ್ನದಾಸೋಹ ಮಾಡುವ ಮೂಲಕ ಹಬ್ಬದ ಈ ಸಂಪ್ರದಾಯವನ್ನು ಸಂಪನ್ನಗೊಳಿಸಲಾಯಿತು. ತಾಲೂಕಿನ ವಿವಿಧ ಗ್ರಾಮಗಳಿಂದ ಬಂದಿದ್ದ ನೂರಾರು ಭಕ್ತರು ಪಂಜಾಗಳ ದರ್ಶನ ಪಡೆದರು.