

ಅಮೀನಗಡ: ಬಲಿದಾನದ ಪ್ರತೀಕವಾದ ಮೊಹರಂ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಭಾನುವಾರ ಆಚರಣೆ ಮಾಡಲಾಯಿತು.
ಕರದಂಟು ನಗರಿ ಅಮೀನಗಡದಲ್ಲಿ ದೇವರುಗಳನ್ನು ಬಟ್ಟೆಗಳಿಂದ ಸಿಂಗರಿಸಲಾಗಿತ್ತು. ಹಸ್ತದ ಪಂಜೆಗಳು, ಡೋಲಿಗಳು ಆಷರ್ಕಣೀಯವಾಗಿದ್ದವು. ಸಮಸ್ತ ಜನಾಂಗದ ಜನರು ಅಲಾಯಿ ದೇವರ ದರ್ಶನ ಪಡೆದು ಸಕ್ಕರೆ ನೈವೇದ್ಯ ಮಾಡಿ ಕಾಣಿಕೆ ಸಮರ್ಪಿಸಿದರು.
ಮೊಹರಂ ಕೊನೆಯ ದಿನವಾದ ಭಾನುವಾರ ಬೆಳಗ್ಗೆ ದೇವರಿಗೆ ಹೂ ಕಟ್ಟು ವಿಶೇಷ ಪೂಜೆ ಸಲ್ಲಿಸಿ ನಂತರ ಅಗ್ನಿಯಲ್ಲಿ ಹಾಯ್ದು ಗ್ರಾಮದ ಅಗಸಿಯಲ್ಲಿ ಹಿರೇಮಸೂತಿಯಲ್ಲಿನ ದೇವರು ಹಾಗೂ ಅತ್ತಾರ, ತಟಗಾರ, ಬಾಗೇವಾಡಿ ಸೇರಿ ವಿವಿಧ ಮಸೂತಿ ದೇವರು ಪರಸ್ಪರ ಭೇಟಿಯಾಗಿ ಪಟ್ಟಣದ ಸಂಗಮೇಶ್ವರ ದೇವಸ್ಥಾನ, ಗ್ರಾಮ ದೇವತೆ ಸೇರಿ ಇತರ ದೇವಸ್ಥಾನಕ್ಕೆ ಹಾಗೂ ದರ್ಗಾಕ್ಕೆ ಭೇಟಿ ನೀಡಿ ಮರಳಿ ಹಿರೇಮಸೂತಿಗೆ ಆಗಮಿಸಿದವು.
ಸಂಜೆ ವಿವಿಧ ಮಸೂತಿಯ ಅಲಾಯಿ ದೇವರು ಮೆರವಣಿಗೆ ಮೂಲಕ ಆಗಮಿಸಿ ಒಂದು ಕಡೆ ಭೇಟಿ ನೀಡಿ ನಂತರ ಪಟ್ಟಣ ಪಂಚಾಯಿತಿಗೆ ತಲುಪಿದವು. ಈ ವೇಳೆ ಸಾವಿರಾರು ಭಕ್ತರು ದೇವರ ದರ್ಶನ ಪಡೆದರು.