ಜಗತ್ತಿನ ಅಂಧಕಾರ ಕಳೆದ ಮುಹಮ್ಮದ್ ಪೈಗಂಬರ್

28SND-02
Published on

ಸಿಂಧನೂರು: ಜನರಲ್ಲಿ ಅರಿವಿನ ಕೊರತೆ ಇದ್ದು, ಎಲ್ಲ ಧರ್ಮಗಳ ಸಾರವನ್ನು ಪರಿಪೂರ್ಣವಾಗಿ ಅರ್ಥ ಮಾಡಿಕೊಂಡಾಗ ಬದುಕು ಹಸನಾಗಲು ಸಾಧ್ಯ ಎಂದು ಪ್ರವಚನಕಾರ ಮುದಗಲ್ ಮಹಾಂತ ಸ್ವಾಮೀಜಿ ಸಾಲಿಮಠ ಹೇಳಿದರು.

ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜನ್ಮ ದಿನಾಚರಣೆ ಅಂಗವಾಗಿ ನಗರದ ನೂರಾನಿ ಮಸೀದಿಯಲ್ಲಿ ಆಯೋಜಿಸಿದ್ದ ಈದ್ ಮಿಲಾದ್ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು. ಜಗತ್ತಿನಲ್ಲಿರುವ ಅಂಧಕಾರವನ್ನು ಅಳಿಸಿ ಹಾಕಲು ಮುಹಮ್ಮದ್ ಪೈಗಂಬರ್ ಅವರಂಥ ಮಹಾನ್ ವ್ಯಕ್ತಿಗಳು ಜನ್ಮ ತಾಳಬೇಕಾಯಿತು. ಪೈಗಂಬರ್ ಅವರು ಹಾಕಿಕೊಟ್ಟ ಧರ್ಮ, ರಾಜ ಮಾರ್ಗದಲ್ಲಿ ನಾವೆಲ್ಲ ಬದುಕು ಕಟ್ಟಿಕೊಳ್ಳಬೇಕು. ಧರ್ಮದ ಸಾರ ಅರಿತರೆ ಜಗತ್ತು ಗೆಲ್ಲಬಹುದೆಂಬದನ್ನು ಅವರು ತೋರಿಸಿಕೊಟ್ಟಿದ್ದಾರೆ. ನಮ್ಮಲ್ಲಿರುವ ಜಾತಿ, ಅಂತಸ್ತಿನ ಅಂಧಕಾರ ಅಳಿಯಬೇಕು. ಮುಹಮ್ಮದ್ ಪೈಗಂಬರ್ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.

ಮಾಜಿ ಶಾಸಕ ವೆಂಕಟರಾವ ನಾಡಗೌಡ ಮಾತನಾಡಿ, ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜೀವನ ಸಾರ ತಿಳಿದುಕೊಂಡು, ಮುಂದಿನ ಪೀಳಿಗೆಗೆ ಸಂದೇಶ ನೀಡುವ ಕೆಲಸವಾಗಬೇಕು. ಯಾವುದೇ ಧರ್ಮದಲ್ಲಿನ ಒಳ್ಳೆಯ ವಿಚಾರ-ಆಚಾರಗಳು ಪ್ರತಿಯೊಬ್ಬರ ಬದುಕಿನ ಮಂತ್ರಗಳಾಗಿವೆ ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಸನಗೌಡ ಬಾದರ್ಲಿ, ವೆಂಕಣ್ಣಾಚಾರ್ಯ ಜೋಶಿ, ಜಿಪಂ ಮಾಜಿ ಸದಸ್ಯರಾದ ಬಾಬುಗೌಡ ಬಾದರ್ಲಿ, ಎನ್.ಶಿವನಗೌಡ ಗೊರೇಬಾಳ, ನಗರಸಭೆ ಸದಸ್ಯ ಕೆ.ರಾಜಶೇಖರ, ಬಾಬರ್ ಪಾಷಾ ವಕೀಲ, ಖಾಜಿ ಮಲ್ಲಿಕ್ ವಕೀಲ, ಅಬೀದ್ ಖಾದ್ರಿ, ಹುಸೇನಸಾಬ್, ಖಾದರ್ ಸುಭಾನಿ, ಶಿವರಾಜ ಪಾಟೀಲ್ ಗುಂಜಳ್ಳಿ, ತಿಮ್ಮಣ್ಣ ಸಾಹುಕಾರ ಕುರುಕುಂದ, ಎಚ್.ಎನ್.ಬಡಿಗೇರ, ಹಾಜಿ ಮಸ್ತಾನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net