

ವಿವಿಧ ಸೇವೆ, ಸುಂಕದ ಮಾರಾಟದ ಹರಾಜು ಪ್ರಕ್ರಿಯೆ
ಮೂಗೂರು : ಗ್ರಾಮದ ಅಧಿದೇವತೆ ಶ್ರೀ ತ್ರಿಪುರ ಸುಂದರಿ ಅಮ್ಮನವರ ಜಾತ್ರಾ ಮಹೋತ್ಸವ ಜನವರಿ 13 ರಿಂದ 17 ರವರೆಗೆ ನೆರವೇರಲಿದೆ. ಈ ಹಿನ್ನೆಲೆಯಲ್ಲಿ ನಾಡ ಕಚೇರಿ ಉಪ ತಹಸೀಲ್ದಾರ್ ಲಕ್ಷ್ಮೀ ಸಮ್ಮುಖದಲ್ಲಿ ಮಂಗಳವಾರ ವಿವಿಧ ಸೇವೆ, ಸುಂಕದ ಮಾರಾಟದ ಹರಾಜು ಪ್ರಕ್ರಿಯೆ ಸಭೆ ನಡೆಯಿತು.
ಗ್ರಾಮದ ಮುಖಂಡ ಎಂ. ಎಂ. ಜಗದೀಶ್ ಮಾತನಾಡಿ, ಮುಡಿ ತೆಗೆಯುವ ತಾಣದಲ್ಲಿ ನಿಗದಿತ ದರಕ್ಕಿಂತ
ಹೆಚ್ಚಿನ ಹಣವನ್ನು ಪ್ರತಿವರ್ಷ ವಸೂಲಿ ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ಇಂತಹ ಅಕ್ರಮ ತಡೆಯಲು ತಾಲೂಕು ಆಡಳಿತ ಮತ್ತು ಮುಜರಾಯಿ ಇಲಾಖೆ ದರ ಫಲಕ ಅಳವಡಿಸಬೇಕು ಎಂದರು.
ಉಪ ತಹಸೀಲ್ದಾರ್ ಲಕ್ಷ್ಮೀ ವಿವರ ನೀಡಿ, ದೇವಾಲಯದ ವಿವಿಧ ಸೇವೆಯ ಹರಾಜಿನ ಆದಾಯ 11 ಲಕ್ಷದ 64 ಸಾವಿರ ರೂ. ದಾಖಲಿಸಿದ್ದು ವಿಶೇಷವಾಗಿತ್ತು. ಕಳೆದ ಬಾರಿ 8 ಲಕ್ಷ ರೂ.ಗೆ ಹರಾಜು ಪ್ರಕ್ರಿಯೆ ನಡೆದಿತ್ತು ಎಂದರು. ಗ್ರಾ. ಪಂ. ಅಧ್ಯಕ್ಷ ಎಂ ಡಿ ಲೋಕೇಶ್, ಪಾರುಪತ್ತೇದಾರ ಸಾಗರ್, ಗ್ರಾಮ ಲೆಕ್ಕಾಧಿಕಾರಿಗಳಾದ ಆನಂದ್, ಸಂತೋಷ್, ಪ್ರಮೋದ್, ಗ್ರಾಪಂ ಮಾಜಿ ಸದಸ್ಯ ಮಾದೇಶ, ಪೊಲೀಸ್ ಸಿಬ್ಬಂದಿಗಳಾದ ಚಂದ್ರ ಶೇಖರ, ಕುಮಾರ್ ಹಾಗೂ ಗ್ರಾಮಸ್ಥರು ಇದ್ದರು.