

ಶಿವಮೊಗ್ಗ: ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಬಹಳಷ್ಟು ಅನ್ಯಾಯವಾಗಿದೆ. ಬಜೆಟ್‌ನಲ್ಲಿ ತಾರತಮ್ಯ ನೀತಿ ಅನುಸರಿಸಲಾಗಿದೆ ಎಂದು ಆರೋಪಿಸಿದ ಕಾಂಗ್ರೆಸ್ ಪ್ರಮುಖರು ಖಾಲಿ ಚೊಂಬು ಪ್ರದರ್ಶಿಸಿ ಶನಿವಾರ ಪ್ರತಿಭಟನೆ ನಡೆಸಿದರು.
ಮಹಾವೀರ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ಸಿಗರು, ಕರ್ನಾಟಕಕ್ಕೆ ಹೊಸ ಯೋಜನೆ ನೀಡಿಲ್ಲ. ನೀರಾವರಿ ಯೋಜನೆಗಳಿಗೆ ಅನುದಾನ ಘೋಷಣೆ ಮಾಡಿಲ್ಲ. ಬರ ಪರಿಹಾರ ಬಿಡುಗಡೆ ಮಾಡಿಲ್ಲ. ಎನ್‌ಡಿಎ ಕೂಟದಿಂದ ರಾಜ್ಯದ 19 ಸಂಸದರು ಲೋಕಸಭೆಯಲ್ಲಿದ್ದರೂ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯವನ್ನು ಪ್ರತಿನಿಧಿಸುತ್ತಿರುವ ಬಿಜೆಪಿ, ಜೆಡಿಎಸ್ ಸಂಸದರು ಬಜೆಟ್‌ನಲ್ಲಿ ನಮ್ಮ ರಾಜ್ಯಕ್ಕೆ ಆಗಿರುವ ಅನ್ಯಾಯದ ಬಗ್ಗೆ ಮಾತನಾಡಿಲ್ಲ. ಕೇಂದ್ರದ ಐವರು ಸಚಿವರು ರಾಜ್ಯದಿಂದ ಆಯ್ಕೆಯಾಗಿದ್ದರೂ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.
ಭದ್ರಾ ಮೇಲ್ದಂಡೆ ಯೋಜನೆಗೆ ಕಳೆದ ಬಜೆಟ್‌ನಲ್ಲಿ 5,300 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ಘೋಷಿಸಿತ್ತು. ಇದುವರೆಗೂ ಹಣ ಬಿಡುಗಡೆಯಾಗಿಲ್ಲ. ಈ ಬಜೆಟ್‌ನಲ್ಲಿ ಅದರ ಬಗ್ಗೆ ಪ್ರಸ್ತಾಪವನ್ನೇ ಮಾಡಿಲ್ಲ. ರಾಜ್ಯಕ್ಕೆ ಕೇಂದ್ರ ಸರ್ಕಾರ ನೀಡಿರುವುದು ಖಾಲಿ ಚೊಂಬು ಮಾತ್ರ ಎಂದು ಕಿಡಕಾರಿದರು.
ಅನುದಾನ ಹಂಚಿಕೆಯಲ್ಲೂ ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡಿದೆ. ಉತ್ತರಪ್ರದೇಶ, ಆಂದ್ರಪ್ರದೇ, ಬಿಹಾರದಂತಹ ರಾಜ್ಯಗಳಿಗೆ ಹೆಚ್ಚಿನ ಪಾಲನ್ನು ನೀಡಲಾಗಿದೆ. ಕೇಂದ್ರ ಮಲತಾಯಿ ಧೋರಣೆ ತೋರಿಸುತ್ತಿದೆ. ಕರ್ನಾಟಕಕ್ಕೆ ಕೇಂದ್ರ ಅನ್ಯಾಯ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ಪ್ರಸನ್ನಕುಮಾರ್, ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್, ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್, ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ, ಮಾಜಿ ಮೇಯರ್ ಎಸ್.ಕೆ.ಮರಿಯಪ್ಪ, ಪ್ರಮುಖರಾದ ಎನ್.ರಮೇಶ್, ಎಚ್.ಸಿ.ಯೋಗೀಶ್, ಎಸ್.ಪಿ.ಶೇಷಾದ್ರಿ, ವಿಜಯಕುಮಾರ್ ಮುಂತಾದವರಿದ್ದರು.