

ಹೆಬ್ರಿ: ಮುದ್ರಾಡಿ ನಾಟ್ಕದೂರು ನಮ ತುಳುವೆರ್ ಕಲಾ ಸಂಘಟನೆ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ನವದೆಹಲಿ ಸಂಸ್ಕೃತಿ ಸಚಿವಾಲಯದ ಸಹಕಾರದಲ್ಲಿ ನಾಟ್ಕದೂರು ಆರೂರು ಪ್ರಸಾದ್ ರಾವ್ ಬಯಲು ರಂಗಮಂದಿರದಲ್ಲಿ ಏ.3ರಿಂದ 7 ತನಕ ಮುದ್ರಾಡಿ ರಾಷ್ಟ್ರೀಯ ರಂಗೋತ್ಸವ-11 ಪ್ರತಿದಿನ ಸಂಜೆ 7ರಿಂದ ನಡೆಯಲಿದೆ.
3ರಂದು ಸಾಹಿತಿ ನಾಟಕಕಾರ ಸರಜೂ ಕಾಟ್ಕರ್ ಮುದ್ರಾಡಿ ಉದ್ಘಾಟಿಸುವರು. ಶಾಸಕ ಸುನೀಲ್ ಕುಮಾರ್ ಅಧ್ಯಕ್ಷತೆ ವಹಿಸುವರು. ಕಾರ್ಕಳ ಯಕ್ಷ ರಂಗಾಯಣದ ನಿರ್ದೇಶಕ ವೆಂಕಟರಮಣ ಐತಾಳ್, ಉತ್ಸವದ ಗೌರವಾಧ್ಯಕ್ಷ ಕೃಷ್ಣಮೂರ್ತಿ ಮಂಜ ಹೈದರಾಬಾದ್, ಉತ್ಸವದ ಅಧ್ಯಕ್ಷ ಕಮಲಾಕ್ಷ ನಾಯಕ್ ಕಾರ್ಕಳ ಉಪಸ್ಥಿತರಿರುವರು.
3ರಂದು ಹೈದರಾಬಾದ್ ಭಾನೋದಯ ನಾಟ್ಯ ಮಂಡಳಿ ಮಾಯಾ ಬಜಾರ್ ನಾಟಕ ಪ್ರದರ್ಶನಗೊಳ್ಳಲಿದೆ. 4ರಂದು ಹೈದರಾಬಾದ್ ಭಾನೋದಯ ನಾಟ್ಯ ಮಂಡಳಿ ಜೈ ಪಾತಾಳ ಬೈರವಿ ನಾಟಕ, 5ರಂದು ಮುದ್ರಾಡಿ ನಾಟ್ಕದೂರು ನಮ ತುಳುವೆರ್ ಕಲಾ ಸಂಘಟನೆ ಅಂಬೆ ನಾಟಕ, 6 ಮತ್ತು 7ರಂದು ಹೈದರಾಬಾದ್ ಭಾನೋದಯ ನಾಟ್ಯ ಮಂಡಳಿ ಲವಕುಶ ಮತ್ತು ಭಕ್ತ ಪ್ರಹ್ಲಾದ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಸಂಸ್ಥೆ ಅಧ್ಯಕ್ಷ ಸುಕುಮಾರ್ ಮೋಹನ್ ತಿಳಿಸಿದ್ದಾರೆ.
ಮುದ್ರಾಡಿ ರಾಷ್ಟ್ರೀಯ ರಂಗೋತ್ಸವ -11ರ ಸಮಾರೋಪ ಏ.7ರಂದು ನಡೆಯಲಿದ್ದು, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜ ಮೂರ್ತಿ ಅಧ್ಯಕ್ಷತೆ ವಹಿಸುವರು. ರಂಗಕರ್ಮಿ ಶ್ರೀನಿವಾಸ ಜಿ.ಕಪ್ಪಣ್ಣ ಅವರಿಗೆ ಮುದ್ರಾಡಿ ನಾಟ್ಕ ಸಂಮಾನ್ ಪ್ರದಾನ ನಡೆಯಲಿದೆ. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕಾಂಗ್ರೆಸ್ ನಾಯಕ ಮುನಿಯಾಲು ಉದಯ ಕುಮಾರ್ ಶೆಟ್ಟಿ ಉಪಸ್ಥಿತರಿರುವರು.