ಮಣ್ಣಿನ ಉತ್ಪನ್ನಗಳಿಗೆ ರಾಷ್ಟ್ರ ಮಟ್ಟದಲ್ಲಿ ಮಾರುಕಟ್ಟೆ

pot new
Published on

ಕುಂದಾಪುರ: ರಾಜ್ಯದ ಕರಕುಶಲ ವಸ್ತುಗಳು ಮತ್ತು ಗುಡಿಕೈಗಾರಿಕೆಗಳಿಗೆ ಉತ್ತೇಜನ ನೀಡಿ, ಕರಕುಶಲಕರ್ಮಿಗಳಿಗೆ ಸ್ವಾವಲಂಬಿ ಬದುಕು ರೂಪಿಸಲು ಕ್ರಮಕೈಗೊಳ್ಳುವ ಜತೆಗೆ ಮಣ್ಣಿನ ಉತ್ಪನ್ನಗಳಿಗೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಮಾರುಕಟ್ಟೆ ದೊರಕಿಸಿಕೊಡಲಾಗುವುದು ಎಂದು ರಾಜ್ಯ ಕರಕುಶಲ ನಿಗಮದ ಅಧ್ಯಕ್ಷ ಡಾ.ಬೇಳೂರು ರಾಘವೇಂದ್ರ ಶೆಟ್ಟಿ ಭರವಸೆ ನೀಡಿದ್ದಾರೆ.

ಕುಂದಾಪುರ ತಾಲೂಕಿನ ಆಲೂರು ಗ್ರಾಮದ ಗುರುವಂದನಾ ಪಾಟರಿ ಪ್ರಾಡಕ್ಟ್ ಸಂಸ್ಥೆಗೆ ಶನಿವಾರ ಭೇಟಿ ನೀಡಿ ಮಡಕೆ ತಯಾರಿ ಮತ್ತು ಮಣ್ಣಿನ ಉತ್ಪನ್ನಗಳ ಕುರಿತು ಮಾಹಿತಿ ಪಡೆದರು. ಕರಕುಶಲ ವಸ್ತುಗಳನ್ನು ವೀಕ್ಷಿಸಿ ಮಡಕೆ ತಯಾರಿಯಲ್ಲಿ ತೊಡಗಿ, ಕೆಲಸಗಾರರಿಗೆ ಪ್ರೋತ್ಸಾಹಿಸಿದರು.

ರಾಜಸ್ಥಾನದ ಮಡಕೆಗಳು ಗಟ್ಟಿಯಾಗಿರುತ್ತವೆ. ನಮ್ಮ ಭಾಗದ ಮಡಕೆಗಳು ಮೃದುವಾಗಿರುತ್ತವೆ. ಅಲ್ಲಿಯ ತಂತ್ರಜ್ಞಾನ ಬಳಕೆ ಮಾಡಿ ಇಲ್ಲಿಯೂ ಅದೇ ರೀತಿ ಮಡಕೆ ತಯಾರಿಸಲು ಅನುವು ಮಾಡಿಕೊಡಲಾಗುವುದು. ಮುಂದಿನ ದಿನಗಳಲ್ಲಿ ಉಡುಪಿಯಲ್ಲಿ ಹತ್ತು ದಿನಗಳ ಕಾಲ ಕರಕುಶಲ ವಸ್ತುಗಳ ಪ್ರದರ್ಶನ ಮೇಳ ಆಯೋಜಿಸುವ ಯೋಚನೆಯಿದೆ. ಮೇಳದಲ್ಲಿ ಬಿದಿರು, ಶಿಲ್ಪಕಲೆ ಮತ್ತು ಮಣ್ಣಿನ ಉತ್ಪನ್ನಗಳನ್ನು ಪ್ರದರ್ಶಿಸಿ ಕರಕುಶಲ ವಸ್ತುಗಳ ಕುರಿತು ಅರಿವು ಮೂಡಿಸಲಾಗುವುದು ಎಂದರು.

ರೈಲುಗಳಲ್ಲಿ ಪ್ಲಾಸ್ಟಿಕ್ ಬದಲು ಮಣ್ಣಿನ ಉತ್ಪನ್ನಗಳನ್ನು ಬಳಸಲು ಕೇಂದ್ರ ಮಂತ್ರಿಗಳಿಗೆ ಮನವಿ ಮಾಡಿ ಕುಂಬಾರರಿಗೆ ಉತ್ತೇಜನ ನೀಡಲಾಗುವುದು. ಪ್ರಧಾನ ಮಂತ್ರಿ ಆತ್ಮನಿರ್ಭರ ಯೋಜನೆಯಂತೆ ಕರ್ನಾಟಕದಲ್ಲಿ ಕರಕುಶಲ ಕರ್ಮಿಗಳನ್ನು ಪ್ರೋತ್ಸಾಹಿಸಿ ಉತ್ತೇಜಿಸಲಾಗವುದು. ಕೆಎಂಎಫ್, ಕರ್ನಾಟಕ ಹಾಲು ಮಹಾಮಂಡಳಿ ಜತೆ ಚರ್ಚಿಸಿ ಮೊಸರು ಮತ್ತು ಐಸ್‌ಕ್ರೀಂ ಉತ್ಪನ್ನಗಳಿಗೆ ದೊಡ್ಡ ನಗರಗಳ ಹೋಟೆಲ್ ಉದ್ಯಮಗಳಿಗೆ ಮಾರುಕಟ್ಟೆ ಒದಗಿಸುವ ಬಗ್ಗೆಯೂ ಪ್ರಸ್ತಾಪವಿದೆ ಎಂದರು.

ಈಗಾಗಲೇ ಕುಂದಾಪುರದಲ್ಲಿ ಕರಕುಶಲ ವಸ್ತುಗಳ ತಯಾರಿಕಾ ಘಟಕ ಪ್ರಾರಂಭಿಸಲು ತೀರ್ಮಾನಿಸಲಾಗಿದ್ದು, ಅದರಲ್ಲಿ ಮಣ್ಣಿನ ಉತ್ಪನ್ನಗಳಿಗಾಗಿ ಪ್ರತ್ಯೇಕ ಒಂದು ಭಾಗ ನಿರ್ಮಿಸಿ, ಉತ್ಪಾದನಾ ಮತ್ತು ಮಾರುಕಟ್ಟೆ ವ್ಯವಸ್ಥೆ ಮಾಡಲಾಗುವುದು. ಅಲ್ಲದೇ, ಉಡುಪಿಯಲ್ಲಿ ಹೊಸದಾಗಿ ಪ್ರಾರಂಭಿಸಲು ತೀರ್ಮಾನಿಸಿರುವ ಮಾರುಕಟ್ಟೆಯಲ್ಲಿ ಮಣ್ಣಿನ ಉತ್ಪನ್ನಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.

ಡಾ. ಬೇಳೂರು ರಾಘವೇಂದ್ರ ಶೆಟ್ಟಿ, ಅಧ್ಯಕ್ಷ, ರಾಜ್ಯ ಕರಕುಶಲ ನಿಗಮ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net