ಪ್ರಶಂಸೆಗೆ ಪಾತ್ರವಾದ ಮುಡಿಗುಂಡ ಆದರ್ಶ ವಿದ್ಯಾಲಯ

ಪ್ರಶಂಸೆಗೆ ಪಾತ್ರವಾದ ಮುಡಿಗುಂಡ ಆದರ್ಶ ವಿದ್ಯಾಲಯ
Published on

ಎಂ.ಪವನ್ ಕುಮಾರ್ ಕೊಳ್ಳೇಗಾಲ

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯ ಸರ್ಕಾರಿ ಶಾಲೆಗಳ ಪೈಕಿ ಶೇ.100ರಷ್ಟು ಫಲಿತಾಂಶ ಪಡೆದು ರಾಜ್ಯ ಸರ್ಕಾರದ ಪ್ರಶಂಸೆಗೆ ಕೊಳ್ಳೇಗಾಲ ಮುಡಿಗುಂಡ ಆದರ್ಶ ವಿದ್ಯಾಲಯ ಪಾತ್ರವಾಗಿದೆ.

2010-11ನೇ ಸಾಲಿನಲ್ಲಿ 6 ರಿಂದ 10ನೇ ತರಗತಿ ವರೆಗೆ ಕೇವಲ 55 ವಿದ್ಯಾರ್ಥಿಗಳಿಂದ ಆರಂಭಗೊಂಡ ಮುಡಿಗುಂಡ ಸರ್ಕಾರಿ ಆದರ್ಶ ಶಾಲೆ ಒಂದೂವರೆ ದಶಕದಲ್ಲಿ ಪರಿಣಾಮಕಾರಿ ಬೋಧನೆ, ಗುಣಮಟ್ಟದ ಫಲಿತಾಂಶ, ಉತ್ತಮ ಕಲಿಕಾ ವಾತಾವರಣದಿಂದಾಗಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಿ ಕೊಂಡಿದೆ. ಸುಂದರವಾದ ಕೈ ತೋಟ, ಸುಸಜ್ಜಿತ ಬೋಧಕ ಕೊಠಡಿಗಳು ಹಾಗೂ ಶಾಲಾ ಮೈದಾನ ಒಳಗೊಂಡಿದೆ.

ಪ್ರಸ್ತುತ ಶಾಲೆಯಲ್ಲಿ 520 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇಲ್ಲಿ ಓದಿದ ವಿದ್ಯಾರ್ಥಿಗಳು ಪಠ್ಯದ ಜತೆ ಪಠ್ಯೇತರ ಚಟುವಟಿಕೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ವಿಶೇಷವಾಗಿ 14 ವರ್ಷದ ಶೈಕ್ಷಣಿಕ ಸಾಲಿನಲ್ಲಿ 7 ಬಾರಿ ಶೇ.100 ರಷ್ಟು ಫಲಿತಾಂಶ ಪಡೆದಿದೆ

ಈ ಬೆಳವಣಿಗೆಯ ಹಿಂದೆ ಶಿಕ್ಷಕರ ಪರಿಶ್ರಮ, ಎಸ್‌ಡಿಎಂಸಿ ಸದಸ್ಯರು ಹಾಗೂ ಪಾಲಕರ ಸಹಕಾರ ಇದೆ. ಕಳೆದ ಎರಡು ವರ್ಷಗಳಿಂದ ನಿರತಂರವಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪೂರ್ಣ ಫಲಿತಾಂಶ ಪಡೆದಿದ್ದಲ್ಲದೆ, 2024-25 ನೇ ಸಾಲಿನಲ್ಲೂ ವಿಭಾಗ ಮಟ್ಟದಲ್ಲೂ ಹೆಚ್ಚು ವಿದ್ಯಾರ್ಥಿಗಳು ಉತ್ತೀರ್ಣರಾದ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಶಾಲೆಯ ಈ ಸಾಧನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಅವರಿಂದ ಸನ್ಮಾನ ಗೊಂಡ ರಾಜ್ಯದ 10 ಸರ್ಕಾರಿ ಪ್ರೌಢಶಾಲೆಗಳ ಪೈಕಿ ಮುಡಿಗುಂಡ ಆದರ್ಶ ವಿದ್ಯಾಲಯವೂ ಸ್ಥಾನ ಪಡೆದಿದೆ.

ವಿದ್ಯಾರ್ಥಿಗಳ ಸಾಧನೆ

ಪಠ್ಯದ ಜತೆ ಪಠ್ಯೇತರ ಚಟುವಟಿಕೆಗಳಲ್ಲೂ ಆದರ್ಶ ವಿದ್ಯಾಲಯ ಬೇರೆ ಶಾಲೆಗಳಿಗೂ ಆದರ್ಶವಾಗಿದೆ. ವಿವಿಧ ವಲಯಗಳಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದಾರೆ. ವಿದ್ಯಾರ್ಥಿ ಅಭಿಜಿತ್ ಟಿ.ನಾಯ್ಕ ಜಾವಲಿನ್ ಕ್ರೀಡೆಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದ. ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಪಿ.ಸಮೃದ್ಧ್, ಅಟಲ್ ಮ್ಯಾರಥಾನ್ ಚಿರಾಗ್, ಎಸ್.ಕುಮಾರ್, ಆನ್‌ಲೈನ್ ಪ್ರಬಂಧ ಸ್ಪರ್ಧೆಯಲ್ಲಿ ಜ್ಞಾನವಿ ಎಂಬ ವಿದ್ಯಾರ್ಥಿನಿ ರಾಜ್ಯಮಟ್ಟದಲ್ಲಿ ಬಹುಮಾನ ಗಳಿಸಿದ್ದನ್ನು ಸ್ಮರಿಸಬಹುದು. ಉತ್ತಮ ಭೌತಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿಗಾಗಿ 8ನೇ ತರಗತಿ ವಿದ್ಯಾರ್ಥಿಗಳಿಗೆ ನಡೆಸಲಾಗುವ ಎನ್.ಎಂ.ಎಂ.ಎಸ್ ಪರೀಕ್ಷೆಯಲ್ಲಿ ತಾಲೂಕಿನಲ್ಲಿ ಆಯ್ಕೆಯಾದ 28 ವಿದ್ಯಾರ್ಥಿಗಳ ಪೈಕಿ 23 ವಿದ್ಯಾರ್ಥಿಗಳು ಇದೇ ಶಾಲೆಯವರಾಗಿದ್ದಾರೆ. 2023-24 ನೇ ಸಾಲಿನಲ್ಲಿ ರಾಜ್ಯ ಸರ್ಕಾರದ ಪುಷ್ಠಿ ಕಾರ್ಯಕ್ರಮದಡಿ ತಾಲೂಕು ಮಟ್ಟದ ಉತ್ತಮ ಎಸ್‌ಡಿಎಂಸಿಗೆ ಆಯ್ಕೆಯಾಗಿ ಒಂದು ಲಕ್ಷ ರೂ. ನಗದು ಬಹುಮಾನ ದೊರೆತಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net