ಮೂಡಿಗೆರೆ ಪಟ್ಟಣ ಪಂಚಾಯಿತಿ ಸದಸ್ಯರು ಪ್ರವಾಸಕ್ಕೆ

unnamed
Published on

ಮೂಡಿಗೆರೆ: ಮಾರ್ಚ್ 1ರಂದು ನಡೆಯಲಿರುವ ಪಟ್ಟಣ ಪಂಚಾಯಿತಿ ಅಧ್ಯಕ್ಷರ ಚುನಾವಣೆಗೆ ಅಖಾಡ ಸಿದ್ಧಗೊಂಡಿದ್ದು, ಆರು ಮಂದಿ ಕಾಂಗ್ರೆಸ್ ಸದಸ್ಯರು ಪ್ರವಾಸಕ್ಕೆ ತೆರಳಿದ್ದಾರೆ.

11ಮಂದಿ ಸದಸ್ಯ ಬಲದ ಪಪಂನಲ್ಲಿ ಕಾಂಗ್ರೆಸ್ 4 ಸ್ಥಾನ ಪಡೆದಿದ್ದು, ಜೆಡಿಎಸ್‌ನ ಏಕೈಕ ಸದಸ್ಯೆ ಗೀತಾ ರಂಜನ್ ಅಜಿತ್ ಕುಮಾರ್ 5 ತಿಂಗಳ ಹಿಂದೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿ 5 ತಿಂಗಳ ಅವಧಿಗೆ ಕಾಂಗ್ರೆಸ್‌ನಲ್ಲಿ ನಡೆದ ಆಂತರಿಕ ಒಪ್ಪಂದದಂತೆ ಅಧ್ಯಕ್ಷರಾಗಿ ರಾಜೀನಾಮೆ ನೀಡಿದ್ದರು. ಬಿಜೆಪಿ ಸದಸ್ಯ ಜೆ.ಬಿ.ಧರ್ಮಪಾಲ್ ಕಳೆದ ಬಾರಿ ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಂಡಿದ್ದರು. ಈ ಬಾರಿ ಕೂಡ ಕಾಂಗ್ರೆಸ್‌ನಲ್ಲೇ ಮುಂದುವರಿದಿದ್ದಾರೆ. ಧರ್ಮಪಾಲ್ ವಿರುದ್ಧ ಬಿಜೆಪಿ ಜಿಲ್ಲಾಧಿಕಾರಿಗೆ ದೂರು ನೀಡಿದೆ. ದೂರು ವಿಚಾರಣಾ ಹಂತದಲ್ಲಿದೆ. ಗೀತಾ ರಂಜನ್ ಅಜಿತ್‌ಕುಮಾರ್, ಜೆ.ಬಿ.ಧರ್ಮಪಾಲ್, ಶಾಸಕಿ ನಯನಾ ಮೋಟಮ್ಮ ಸೇರಿ ಪಪಂನಲ್ಲಿ ಕಾಂಗ್ರೆಸಿನ 7 ಮತವಿದೆ.

ಬಿಜೆಪಿಯಲ್ಲಿ ಪಪಂನ 5 ಸದಸ್ಯರಿದ್ದಾರೆ. ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ಉಪಸಭಾಪತಿ ಎಂ.ಕೆ.ಪ್ರಾಣೇಶ್ ಅವರ ಮತಗಳು ಸೇರಿ 7 ಮತವಿದೆ. ಉಪಸಭಾಪತಿ ಎಂ.ಕೆ.ಪ್ರಾಣೇಶ್ ಅವರ ವಿಧಾನ ಪರಿಷತ್ ಸದಸ್ಯತ್ವದ ಮರು ಮತ ಏಣಿಕೆ ಫೆ.28 ರಂದು ನಡೆಯಲಿರುವುದರಿಂದ ಬಿಜೆಪಿಯಲ್ಲಿ ಆತಂಕ ಹೆಚ್ಚಾಗಿದೆ. ಮತ ಏಣಿಕೆ ನಡೆದ ದಿನ ಫಲಿತಾಂಶವನ್ನು ಚುನಾವಣಾ ಆಯೋಗ ಪ್ರಕಟಿಸುವಂತಿಲ್ಲ. ಅದನ್ನು ನ್ಯಾಯಾಲಯ ಪ್ರಕಟಿಸಬೇಕಾಗಿದೆ. ಹಾಗಾಗಿ ಪಪಂನಲ್ಲಿ ಮತದಾನಕ್ಕೆ ಅಡ್ಡಿ ಎದುರಾಗುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net