

ಮುಧೋಳ: 2018-19, 2019-20 ಸೇರಿ ಹಳೆಯ ಎಲ್ಲ ಕಬ್ಬಿನ ಬೆಳೆ ಬಾಕಿ ಹಣ ಪೂರ್ತಿಯಾಗಿ ಪಾವತಿ ಮಾಡುವವರೆಗೆ ಹಾಗೂ ಈ ವರ್ಷದ ದರ ನಿಗದಿ ಆಗುವವರೆಗೆ ಯಾವುದೇ ಕಾರಣಕ್ಕೂ ಕಾರ್ಖಾನೆಗಳನ್ನು ಪ್ರಾರಂಭಿಸಬಾರದು, ಪ್ರಾರಂಭವಾದ ಎಲ್ಲ ಸಕ್ಕರೆ ಕಾರ್ಖಾನೆಗಳು ಬಂದ್ ಆಗಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ, ಹಸಿರು ಸೇನೆ ಹಾಗೂ ಕಬ್ಬು ಬೆಳೆಗಾರರ ಹೋರಾಟ ಸಮಿತಿಯವರು ಪಟ್ಟಣದ ಬೆಳಗಾವಿ-ವಿಜಯಪುರ ರಾಜ್ಯ ಹೆದ್ದಾರಿಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಮಂಗಳವಾರ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.
ಕಬ್ಬು ಬೆಳೆಗಾರರ ಸಂಘದ ಮುಖಂಡ ಕೆ.ಟಿ. ಪಾಟೀಲ ಮಾತನಾಡಿ, ಸರ್ಕಾರ ಎಲ್ಲ ವಸ್ತುಗಳಿಗೆ ಬೆಲೆ ನಿಗದಿಪಡಿಸಿದ್ದು ರೈತರು ಬೆಳೆದ ಬೆಳೆಗೆ ಏಕೆ ತಾರತಮ್ಯ ನೀತಿ ಮಾಡುತ್ತಿದೆ ಎಂಬುದು ತಿಳಿಯುತ್ತಿಲ್ಲ. ಎಲ್ಲ ಸಮಸ್ಯೆಗಳು ಇತ್ಯರ್ಥವಾಗದಿದ್ದರೆ ಅ.28 ರಂದು ಬೆಳಗ್ಗೆ 11 ಗಂಟೆಯಿಂದ ಅನಿರ್ದಿಷ್ಟಾವಧಿ ಬೃಹತ್ ಹೋರಾಟ ಪ್ರಾರಂಭಿಸಲಾಗುವುದು. 2020-21ನೇ ಸಾಲಿನಲ್ಲಿ ಪ್ರತಿಟನ್ ಕಬ್ಬಿಗೆ 3500 ರೂ. ದರ ನಿಗದಿ ಮಾಡಲು ಸರ್ಕಾರ ಮುಂದೆ ಬರಬೇಕು. ಜಿಲ್ಲಾಧಿಕಾರಿ ಅವರು ರೈತರ ಸಮ್ಮುಖದಲ್ಲೇ ಬೆಲೆ ನಿಗದಿ ಮಾಡಬೇಕು. ಕೂಡಲೇ ಸೂಕ್ತ ಬೆಲೆ ನಿಗದಿ ಮಾಡಿ ಕಬ್ಬು ನುರಿಸುವ ಕಾರ್ಯ ಆರಂಭವಾಗಬೇಕು ಎಂದು ಹೇಳಿದರು.
ಕಬ್ಬು ಬೆಳೆಗಾರರ ಸಂಘದ ಮುಖಂಡರಾದ ಉದಯ ಸಾರವಾಡ, ವಿಶ್ವನಾಥ ಉದಗಟ್ಟಿ, ದುಂಡಪ್ಪ ಯರಗಟ್ಟಿ, ಕಲ್ಮೇಶ ಹಣಗೂಜಿ, ಸದಾಶಿವ ಸಂಕ್ರಟ್ಟಿ, ರಾಚಪ್ಪ ಕಳ್ಳೋಳ್ಳಿ, ಪರಮಾನಂದ ಸಂಕ್ರಟ್ಟಿ, ಮಹೇಶ ಪಾಟೀಲ, ನಾಗೇಶ ಸೋರಗಾಂವಿ, ಬಸವಂತ ಕಾಟೆ, ಗೋವಿಂದಪ್ಪ ಗುಜ್ಜನವರ, ಸುಭಾಷ ಶಿರಬೂರ, ಬಂಡು ಘಾಟಗೆ ಇತರರು ಇದ್ದರು.