ಇಂದು ಬಯೋ ಎನರ್ಜಿ ಘಟಕಕ್ಕೆ ಅಡಿಗಲ್ಲು

dvg Murugesh nirani press meet apr 11-
Published on

ಮುಧೋಳ: ನಿರಾಣಿ ಉದ್ಯಮ ಸಮೂಹದ ಆಶ್ರಯದಲ್ಲಿ ಸಿ.ಎನ್.ಜಿ. ಗ್ಯಾಸ್ ಉತ್ಪಾದನೆ ಬಯೋ ಕಾಂಪೋಸ್ಟ್ ಹಾಗೂ ಇಥೆನಾಲ್ ಘಟಕದ ವಿಸ್ತರಣೆಯ ಭೂಮಿ ಪೂಜೆ ಕಾರ್ಯಕ್ರಮವನ್ನು ನ. 27ರಂದು ಬೆಳಗ್ಗೆ 10.30 ಗಂಟೆಗೆ ಡಿಸ್ಟಿಲರಿ ಘಟಕದ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಶಾಸಕ ಹಾಗೂ ನಿರಾಣಿ ಉದ್ಯಮ ಸಮೂಹದ ಅಧ್ಯಕ್ಷ ಮುರುಗೇಶ ನಿರಾಣಿ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ ವರ್ಚುವಲ್ ಮೂಲಕ ಅಡಿಗಲ್ಲು ಸಮಾರಂಭ ನೆರೆವೇರಿಸಲಿದ್ದಾರೆ. ಕರ್ನಾಟಕದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್, ಇರಾಡ್ ಬ್ಯಾಂಕ್ ಅಧ್ಯಕ್ಷ ಪ್ರದೀಪಕುಮಾರ ದಾಸ್, ನಬಾರ್ಡ್ ಅಧ್ಯಕ್ಷ ಜಿ.ಆರ್. ಚಿಂತಾಲ್, ಕೇಂದ್ರ ಹಿರಿಯ ಅಧಿಕಾರಿಗಳಾದ ಇಂದುಶೇಖರ್ ಚತುರ್ವೇದಿ, ಅತುಲ್ ಚತುರ್ವೇದಿ, ಬಿ. ರಾಜ್‌ಕುಮಾರ, ಸುಬೋಧಕುಮಾರ ಮುಖೇಶ್ ತರುಣ ಕರ್ಫೂರ್, ಇಂಡಿಯಲ್ ಆಯಿಲ್ ಕಾರ್ಪೋರೇಷನ್ ಅಧ್ಯಕ್ಷ ಎಸ್.ಎಂ. ವೈದ್ಯ ಅವರು ವರ್ಚುವಲ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ತ್ಯಾಜ್ಯದಿಂದ ಪರ್ಯಾಯ ಇಂಧನ ಉತ್ಪಾದಿಸುವುದು ಹೊಸ ಕೈಗಾರಿಕೆಯ ಉದ್ದೇಶವಾಗಿದೆ. ಇದು ದೇಶದಲ್ಲಿಯೇ ಪ್ರಥಮ ಪ್ರಯತ್ನವಾಗಿದೆ. ಇಲ್ಲಿ ಉತ್ಪಾದನೆಯಾಗುವ ಇಂಧನವನ್ನು ವಿಮಾನ, ಹೆಲಿಕಾಪ್ಟರ್‌ಗಳಿಗೆ ಬಳಸಬಹುದಾಗಿದೆ. ಸಾರಿಗೆ ವಾಹನಗಳಿಗೂ ಈ ಇಂಧನ ಬಳಸುವುದಕ್ಕೆ ಅವಕಾಶವಿದೆ. ಇದರಿಂದ ಕಚ್ಚಾ ತೈಲದ ಆಮದು ತಗ್ಗಿಸಬಹುದಾಗಿದೆ. ದೇಶದ ಆರ್ಥಿಕ ರಂಗಕ್ಕೆ ಇದು ದೊಡ್ಡ ಶಕ್ತಿಯನ್ನು ತುಂಬುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ನಿರಾಣಿ ಹೇಳಿದ್ದಾರೆ.

ಇಥೆನಾಲ್ ಘಟಕವನ್ನು 150 ಕೆ.ಎಲ್.ಪಿ.ಡಿ. ಯಿಂದ 350 ಕೆ.ಎಲ್.ಪಿ.ಡಿ. ಗೆ ವಿಸ್ತರಿಸಲು ಆಯೋಜಿಸಲಾಗಿದೆ. ವಿಸ್ತರಣಾ ಘಟಕದ ಉದ್ಘಾಟನೆ ಇದೇ ಸಂದರ್ಭದಲ್ಲಿ ನಡೆಯಲಿದೆ. ಪ್ರಸಿದ್ಧ ಪ್ರಾಸ್ ಸಂಸ್ಥೆ ಘಟಕಗಳ ನಿರ್ಮಾಣ ಕೆಲಸಕ್ಕೆ ಒಪ್ಪಂದ ಮಾಡಿಕೊಂಡಿದೆ. ಇದರಿಂದಾಗಿ ಅಂದಾಜು 500 ಯುವಕರಿಗೆ ಉದ್ಯೋಗ ಅವಕಾಶ ದೊರೆಯಲಿದೆ ಎಂದು ತಿಳಿಸಿದ್ದಾರೆ.

ಗುಣಮಟ್ಟದ ಸಂಸ್ಕರಿಸಿದ ಸಕ್ಕರೆಯ 1 ಕಿಲೋ ಮತ್ತು 2 ಕಿಲೋ ತೂಕದ ಪಾಕೇಟ್‌ಗಳ ಬಿಡುಗಡೆ ಮಾಡಲಾಗುವುದು. ಜಿಲ್ಲಾಧಿಕಾರಿ ಡಾ. ಕೆ. ರಾಜೇಂದ್ರ ಮತ್ತು ಎಸ್ಪಿ ಲೋಕೇಶ್ ಜಗಲಾಸರ್ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net