

ಮುಧೋಳ: ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದು, ಬಹುಮತವಿದ್ದರೂ ಬಿಜೆಪಿಗೆ ಸೋಲಾಗಿ ತೀವ್ರ ಮುಖಭಂಗ ಅನುಭವಿಸಿದೆ.
ಅಧ್ಯಕ್ಷರಾಗಿ ಕಾಂಗ್ರೆಸ್ಸಿನ ಸುಧಾ ಹಣಮಂತ ತೇಲಿ, ಉಪಾಧ್ಯಕ್ಷರಾಗಿ ಪಕ್ಷೇತರ ಅಭ್ಯರ್ಥಿ ಮೆಹಬೂಬಸಾಬ ಮುಕ್ತುಮ್‌ಸಾಬ ಬಾಗವಾನ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಪಕ್ಷದ 11, ಬಿಜೆಪಿಯ ನಾಲ್ಕು, ಪಕ್ಷೇತರ ಒಂದು ಹಾಗೂ ಒಂದು ಶಾಸಕರ ಮತ ಸೇರಿ ಇಬ್ಬರು ತಲಾ ಹದಿನೇಳು ಮತ ಪಡೆದು ಆಯ್ಕೆಯಾದರು.
ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ವರ್ಗಕ್ಕೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದವು. ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ಗಾಯತ್ರಿ ಗಣಪತಿ ಸಿಂಗಾಡಿ, ಉಪಾಧ್ಯಕ್ಷ ಸ್ಥಾನಕ್ಕೆ ರಪುಗಾರ ರಾಜಾಸಾಬ ದಸ್ತಗೀರಸಾಬ ನಾಮಪತ್ರ ಸಲ್ಲಿಸಿದ್ದರು. ಇಬ್ಬರೂ ಬಿಜೆಪಿಯ 12, ಕಾಂಗ್ರೆಸ್‌ನ ಮೂವರು ಹಾಗೂ ಸಂಸದರ ಒಂದು ಮತ ಸೇರಿ ತಲಾ 16 ಮತ ಪಡೆದು ಪರಾಭವಗೊಂಡರು.
ನಗರಸಭೆಯ 31 ಸ್ಥಾನಗಳಲ್ಲಿ ಬಿಜೆಪಿಯ 16 ಸದಸ್ಯರಲ್ಲಿ ಸುರೇಶ ಕಾಂಬಳೆ, ಸುನೀತಾ ಪುಂಡಲೀಕ ಭೋವಿ, ಸದಾಶಿವ ಜೋಶಿ, ಪಾರ್ವತೆವ್ವ ಹರಗಿ ಕಾಂಗ್ರೆಸ್‌ಗೆ ಬೆಂಬಲಿಸಿದರು. ಬಿಜೆಪಿಯ ಕೆಲವು ಸದಸ್ಯರು ಕಾಂಗ್ರೆಸ್ ಬೆಂಬಲಿಸಲಿದ್ದಾರೆ ಎನ್ನುವ ಸುಳಿವು ಪಕ್ಷದ ನಾಯಕರಿಗೆ ಮೊದಲೇ ಗೊತ್ತಿತ್ತು. ಬಿಜೆಪಿ ತನ್ನ ಸದಸ್ಯರಿಗೆ ವಿಪ್ ಜಾರಿಗೊಳಿಸಿದ್ದರೂ ನಾಲ್ವರು ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿದರು. ಸೇರಿಗೆ ಸವ್ವಾ ಸೇರು ಎಂಬಂತೆ ಕಾಂಗ್ರೆಸ್ ಪಕ್ಷದ ದ್ರಾಕ್ಷಾಯಣಿ ಹಲಸಂಗಿಮಠ, ಲತಾ ಗಾಯಕವಾಡ, ರಾಜಾಸಾಬ ರಪುಗಾರ ಮೂವರು ಸದಸ್ಯರು ಬಿಜೆಪಿ ಪರ ಮತ ಚಲಾಯಿಸಿದರೂ ಬಿಜೆಪಿ ಗೆಲುವು ಸಾಧಿಸುವಲ್ಲಿ ವಿಫಲವಾಯಿತು.
ನಗರಸಭೆಯಲ್ಲಿ ಕಡಿಮೆ ಸದಸ್ಯರಿದ್ದರೂ ಪಕ್ಷ ಅಧಿಕಾರ ಹಿಡಿಯುವುದನ್ನು ಸಚಿವ ಆರ್.ಬಿ.ತಿಮ್ಮಾಪೂರ ಪ್ರತಿಷ್ಠೆಯಾಗಿ ತೆಗೆದುಕೊಂಡು ಅದರಲ್ಲಿ ಯಶಸ್ವಿಯಾಗಿದ್ದಾರೆ.
ಚುನಾವಣಾಧಿಕಾರಿಯಾಗಿ ಜಮಖಂಡಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ತಹಸೀಲ್ದಾರ್ ವಿನೋದ ಹತ್ತಳ್ಳಿ, ನಗರಸಭೆ ಆಯುಕ್ತ ಗೋಪಾಲ ಕಾಸೆ, ವ್ಯವಸ್ಥಾಪಕಿ ಭಾರತಿ ಜೋಶಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್, ಸಿಪಿಐ ಮಹದೇವ ಶಿರಹಟ್ಟಿ, ಪಿಎಸ್‌ಐ ಅಜಿತ ಹೊಸಮನಿ, ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ ಹಿನ್ನೆಲೆಯಲ್ಲಿ ನಗರಸಭೆ ಕಚೇರಿ ಸುತ್ತಮುತ್ತ ಸೋಮವಾರ ಜಿಲ್ಲಾ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಪ್ರಸನ್ ನೇತತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ವಿಜಯೋತ್ಸವ: ಮುಧೋಳದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ ನಂತರ ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಯುವಕರು ಎಲ್ಲ ವತ್ತದಲ್ಲಿ ಗುಲಾಲು ಹಾಗೂ ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ಕಾಂಗ್ರೆಸ್ ಲೋಕಾಪುರ ಬ್ಲಾಕ್ ಅಧ್ಯಕ್ಷ ಅಶೋಕ ಕಿವಡಿ, ಕೆಎಂಎಫ್ ಮಾಜಿ ಅಧ್ಯಕ್ಷ ಸಂಜಯ ತಳೇವಾಡ, ಉದಯ ಸಾರವಾಡ ಇದ್ದರು.
ಮುಧೋಳ ನಗರದಲ್ಲಿ ಕಾಂಗ್ರೆಸ್ ಸದಸ್ಯರು ಒಗ್ಗೂಡಿದ್ದಾರೆ. ಉಳಿದ ಪಕ್ಷದವರು ಸಹಕಾರ ನೀಡಿದ್ದು, ಅವರೆಲ್ಲರಿಗೂ ಅಭಿನಂದನೆ ತಿಳಿಸುವೆ. ಆಕಾಂಕ್ಷಿಗಳ ಪಟ್ಟಿ ದೊಡ್ಡದಿತ್ತು. ಪಕ್ಷ ಹಲವರಿಗೆ ಅವಕಾಶ ಮಾಡಿಕೊಟ್ಟಿದೆ. ಬೆಳೆಯುತ್ತಿರುವ ನಗರಕ್ಕೆ ಮೂಲ ಸೌಲಭ್ಯ ಒದಗಿಸಲು ಎಲ್ಲರೂ ಒಂದಾಗಿ ಶ್ರಮಿಸಬೇಕು. ನಗರ ಅಭಿವೃದ್ಧಿಗೆ ನನ್ನ ಕಡೆಯಿಂದ ಸಹಕಾರ ಇದ್ದೇ ಇರುತ್ತದೆ.
ಆರ್.ಬಿ.ತಿಮ್ಮಾಪೂರ, ಜಿಲ್ಲಾ ಉಸ್ತುವಾರಿ ಸಚಿವ