

ವೆಂಕಟೇಶ ಗುಡೆಪ್ಪನವರ ಮುಧೋಳ
ಕನ್ನಡ ಸಾಹಿತ್ಯದ ಶಕ್ತಿ ರನ್ನನ ವೈಭವ ಮರುಕಳಿಸಲು 2012ರಲ್ಲಿ ಅಂದಿನ ಸರ್ಕಾರ ಪ್ರಾರಂಭಿಸಿದ ರನ್ನ ವೈಭವ ಕಳೆದ ಆರು ವರ್ಷಗಳಿಂದ ಮರೆಯಾಗಿತ್ತು. ಈ ಬಾರಿ ಮತ್ತೆ ರನ್ನ ವೈಭವ ಮರುಕಳಿಸುತ್ತಿರುವುದು ಕನ್ನಡ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.
ಅನಾರೋಗ್ಯದ ನಡುವೆಯೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಸಕ್ರಿಯವಾಗಿ ವೈಭವದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಫೆ.22ರಿಂದ 24ರವರೆಗೆ ನಡೆಯುವ ವೈಭವಕ್ಕಾಗಿ ಸಿದ್ಧತೆಗಳು ಜೋರಾಗಿ ನಡೆದಿವೆ.ಸಿಎಂ ಸಿದ್ದರಾಮಯ್ಯ ಚಾಲನೆ: ತಾಲೂಕು, ಜಿಲ್ಲೆಗೆ ಮಾತ್ರ ಸೀಮಿತವಾಗಿದ್ದ ರನ್ನ ರಥಯಾತ್ರೆಗೆ ಪ್ರಥಮ
ಬಾರಿಗೆ ಬೆಂಗಳೂರಿನಲ್ಲಿ ಫೆ. 18 ರಂದು ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಸಭಾಪತಿ ಬಸವರಾಜ ಹೊರಟ್ಟಿ, ಸಚಿವ ಸತೀಶ ಜಾರಕಿಹೊಳಿ ಮತ್ತಿತರರಿಗೂ ಆಹ್ವಾನ ನೀಡಲಾಗಿದೆ. ಕಾರ್ಯಕ್ರಮ ಯಶಸ್ಸಿಗೆ 26 ಸಮಿತಿಗಳನ್ನು ರಚಿಸಲಾಗಿದೆ.
ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಸೇರಿದಂತೆ ಎಲ್ಲ ಅಧಿಕಾರಿಗಳು ಮುಧೋಳದಲ್ಲಿ ಬೀಡುಬಿಟ್ಟು ಕಾರ್ಯ ಮಾಡುತ್ತಿರುವುದು ವಿಶೇಷ. ರನ್ನ ವೈಭವ 2025ರ ಅಂಗವಾಗಿ ನಾಡಿನ ಶ್ರೇಷ್ಠ ಕವಿ, ಕವಯಿತ್ರಿಯರು, ಕಲಾವಿದರು. ನಟ-ನಟಿಯರು, ಅಂತಾರಾಜ್ಯದ ಕಲಾ ತಂಡಗಳು ಪಾಲ್ಗೊಂಡು ಕಲಾ ವೈಭವ ಪ್ರದರ್ಶಿಸಲಿದ್ದಾರೆ. ಸಕಲ ಕಲಾ ವಿದ್ವಾಂಸರ ಸಮಾಗಮ ಈ ಬಾರಿ ರನ್ನ ವೈಭವದ ವಿಶೇಷತೆಯಾಗಲಿದೆ.
ರನ್ನ ಪ್ರತಿಷ್ಠಾನದ ವತಿಯಿಂದ ರನ್ನ ಹಳಗನ್ನಡ ಪ್ರಶಸ್ತಿಯನ್ನು 2014ರಲ್ಲಿ ಜರುಗಿದ ರನ್ನ ಉತ್ಸವದಲ್ಲಿ ನಾಡಿನ ಶ್ರೇಷ್ಠ ವಿದ್ವಾಂಸ, ಸಂಶೋಧಕರಾಗಿದ್ದ ಡಾ. ಎಂ.ಎಂ. ಕಲಬುರ್ಗಿ ಅವರಿಗೆ ನೀಡಿ ಗೌರವಿಸಲಾಗಿತ್ತು. ನಂತರ ಡಾ.ಷ.ಶೆಟ್ಟರ, ಹಂಪ ನಾಗರಾಜಯ್ಯ, ವೆಂಕಟಾಚಲಯ್ಯ ಅವರಿಗೆ ನೀಡಿ ಗೌರವಿಸಿದ್ದು, ಈ ಸಲ ಒಟ್ಟು ಆರು ಜನರಿಗೆ ಪ್ರಶಸ್ತಿ ನೀಡಬೇಕಿದೆ.
ರನ್ನ ವೈಭವದ ಪ್ರಯುಕ್ತ ಮುಧೋಳ ನಗರವು ಮದುವಣಗಿತ್ತಿಯಂತೆ ಶೃಂಗಾರಗೊಳ್ಳುತ್ತಿದೆ. ಮೂಲೆಗುಂಪಾಗಿದ್ದ ರನ್ನನ ಗದೆಗಳು ಬಣ್ಣ ಕಂಡಿದ್ದು, ರನ್ನ ಭವನ, ಗ್ರಂಥಾಲಯ, ಕಸಾಪ ಕಟ್ಟಡದ ಸುತ್ತಮುತ್ತ ರನ್ನ ಸ್ನೇಹಿ ಬಳಗ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದೆ. ರನ್ನರಥ, ಅಲಂಕಾರ, ವೇದಿಕೆ, ಮನರಂಜನೆ, ಜಾನಪದ, ರಥಯಾತ್ರೆ, ಸಾರಿಗೆ, ವಸತಿ, ಆಹಾರ, ಮೂಲ ಸೌಲಭ್ಯ, ಆರೋಗ್ಯ ಮತ್ತು ನೈರ್ಮಲ್ಯ, ಕಾನೂನು, ಕವಿಗೋಷ್ಠಿ, ವಸ್ತು ಪ್ರದರ್ಶನ ಮುಂತಾದ ಸಮಿತಿಗಳು ಕೆಲಸ ನಿರ್ವಹಿಸುತ್ತಿದ್ದು, ಉತ್ಸವಕ್ಕೆ 4 ಕೋಟಿ ರೂ. ವೆಚ್ಚವಾಗಲಿದೆ. ರನ್ನ ವೈಭವದ ಎರಡು ದಿನದ ಊಟದ ವ್ಯವಸ್ಥೆಯನ್ನು ಅನ್ನದಾನಿ ಮಹಾಸ್ವಾಮಿಗಳು ವಹಿಸಿಕೊಂಡಿದ್ದಾರೆ.
.11 ಅಥವಾ 12ರಂದು ಪ್ರಾರಂಭವಾಗಬೇಕಿದ್ದ ರನ್ನ ರಥಯಾತ್ರೆಗೆ ಫೆ.13ರಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಬೆಳಗಲಿಯಲ್ಲಿ ಚಾಲನೆ ನೀಡಲಿದ್ದಾರೆ. ಈ ರಥಯಾತ್ರೆಯು ಅಖಂಡ ಮುಧೋಳ ತಾಲೂಕಿನ 73 ಗ್ರಾಮ, ಪಟ್ಟಣಗಳನ್ನು ಸುತ್ತಿ ಫೆ.21ರಂದು ಮುಧೋಳಕ್ಕೆ ಆಗಮಿಸಲಿದೆ.
ಮೈಸೂರು ದಸರಾ ಮಾದರಿಯಲ್ಲಿ ರಾಜ್ಯ ಮಟ್ಟದಲ್ಲಿ ವಿಶೇಷವಾಗಿ ರನ್ನ ವೈಭವ ಆಚರಿಸಲು ಪಣತೊಟ್ಟಿದ್ದು, ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಪಾದರಸದಂತೆ ಕೆಲಸ ಮಾಡುತ್ತಿದೆ. ಇದಕ್ಕೆ ಸಾರ್ವಜನಿಕರು, ರನ್ನ ಅಭಿಮಾನಿಗಳು ಕೈ ಜೋಡಿಸಿ ಹಬ್ಬದ ವಾತಾವರಣ ಸೃಷ್ಟಿಸುವ ಮೂಲಕ ರಾಜ್ಯಕ್ಕೆ ಮಾದರಿ ಉತ್ಸವವಾಗುವಂತೆ ಆಚರಿಸಬೇಕು. ಆರ್.ಬಿ.ತಿಮ್ಮಾಪೂರ, ಜಿಲ್ಲಾ ಉಸ್ತುವಾರಿ ಸಚಿವರು