

ಮುಧೋಳ: ಮೂರು ದಶಕದಿಂದ ಈ ಭಾಗದ ಸುಮಾರು ಹತ್ತು ಗ್ರಾಮಗಳ ರೈತರಿಗೆ ಹಾಗೂ ಜನ-ಜಾನುವಾರಗಳಿಗೆ ಜಲದ ಮೂಲವಾಗಿದ್ದ ತಾಲೂಕಿನ ಜಾಲಿಬೇರ ಬ್ಯಾರೇಜ್ ಈಗ ಅಪಾಯದ ಸ್ಥಿತಿಯಲ್ಲಿದೆ.
ಮಹಾಮಳೆಗೆ ಸಿಲುಕಿ ಬ್ಯಾರೇಜ್‌ನ ಎರಡು ಪಕ್ಕದಲ್ಲಿ ಮಣ್ಣು ಕೊರೆತ ಹೆಚ್ಚಾಗಿದೆ. ಮತ್ತೆ ಬ್ಯಾರೇಜ್‌ಗೆ ತಡೆಗೋಡೆ ನಿರ್ಮಾಣವಾಗುವವರಿಗೂ ಹತ್ತು ಗ್ರಾಮಗಳ ರೈತರು ಅಪಾಯ ಎದುರಿಸುವ ಸ್ಥಿತಿ ನಿರ್ಮಾಣವಾಗುತ್ತಿದೆ.
ಮೂವತ್ತು ವರ್ಷಗಳಿಂದ ಜಾಲಿಬೇರ, ಉತ್ತೂರ, ಮಳಲಿ, ರಂಜಣಗಿ, ಚೆನ್ನಾಳ, ಸೋರಗಾಂವಿ, ನಾಗರಾಳ, ಒಂಟಗೋಡಿ, ಮಿರ್ಜಿ, ಮಲ್ಲಾಪುರ ಗ್ರಾಮಗಳು ಎರಡು ಸಾವಿರಕ್ಕೂ ಹೆಚ್ಚು ಎಕರೆ ಜಮೀನುಗಳಿಗೆ ಹಾಗೂ ಜನ-ಜಾನುವಾರಿಗಳಿಗೆ ಸಹಕಾರಿಯಾಗಿದೆ.
ಬಹುವಿಧದಲ್ಲಿ ಉಪಯೋಗ
ಕೇವಲ ಹತ್ತು ಗ್ರಾಮಗಳಿಗೆ ರೈತರಿಗೆ ಹಾಗೂ ಜಾನುವಾರುಗಳಿಗೆ ನೀರು ಪೂರೈಕೆಗೆ ಮಾತ್ರವಲ್ಲದೆ ಸೋರಗಾಂವಿ, ಜಾಲಿಬೇರ, ಮಹಾಲಿಂಗಪುರ ಹೋಗಲು ಅನುಕೂಲವಾಗಲು ಈ ಬ್ಯಾರೇಜ್ ರಸ್ತೆಯಂತೆ ಕಾರ್ಯಮಾಡುತ್ತಿದೆ. ಮುಧೋಳ ಜನತೆಗೆ ಕುಡಿಯಲು ಇರುವ ಏಕೈಕ ಕೆರೆ ವೆಂಕಟೇಶ ಮಹಾರಾಜ ಕೆರೆಗೆ ನೀರು ಪೂರೈಸಲು ಈ ಬ್ಯಾರೇಜ್‌ನಿಂದಲೇ ಪೈಪ್‌ಲೈನ್ ಮಾಡಲಾಗಿದ್ದು, ಬೇಸಿಗೆಯಲ್ಲಿ ಇಲ್ಲಿನ ನೀರು ಕೆರೆಗೆ ಪೂರೈಕೆಯಾಗುತ್ತದೆ. ಹೀಗಾಗಿ ಈ ಬ್ಯಾರೇಜ್ ಮಣ್ಣು ಕೊರೆತ ಉಂಟಾಗಿ ಅಪಾಯ ಸಂಭವಿಸಿದರೆ ಭಾರಿ ಪೆಟ್ಟು ನೀಡುತ್ತದೆ.
ಕೂಡಲೇ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಎಚ್ಚೆತ್ತು ಬ್ಯಾರೇಜ್ ಮೇಲಿನ ಪ್ರಯಾಣವನ್ನು ನಿರ್ಬಂಧಿಸಿ, ಎರಡು ಬದಿಯ ಮಣ್ಣು ಕೊರೆತಕ್ಕೆ ತಡೆಗೋಡೆ ನಿರ್ಮಾಣ ಮಾಡಬೇಕೆಂದು ರೈತರಾದ ರವಿ ಹೊರಟ್ಟಿ, ಉದಯ ಸಾರವಾಡ ಒತ್ತಾಯಿಸಿದ್ದಾರೆ.
ಬಹುಗ್ರಾಮಗಳಿಗೆ ಹಾಗೂ ಮುಧೋಳ ಜನತೆಗೆ ಕುಡಿಯುವ ನೀರು ಪೂರೈಸುವ ಜಾಲಿಬೇರ ಬ್ಯಾರೇಜಿನ ಎರಡು ಪಕ್ಕದಲ್ಲಿ ಮಣ್ಣು ಕೊರೆತ ಉಂಟಾಗುತ್ತಿದ್ದು, ಕಳೆದ ಬಾರಿ ಸ್ವಲ್ಪ ಕೊರೆತ ಉಂಟಾಗಿತ್ತು. ಈಗ ಮತ್ತಷ್ಟು ಕೊರೆತ ಉಂಟಾಗುತ್ತಿದ್ದು, ಪ್ರಾಣಹಾನಿಯಾಗುವ ಮುನ್ನ ಸಂಚಾರ ನಿರ್ಬಂಧಿಸಿ ಎರಡು ಪಕ್ಕದಲ್ಲಿ ತಡೆಗೋಡೆ ನಿರ್ಮಿಸಬೇಕಿದೆ.
- ರವಿ ಹೊರಟ್ಟಿ, ರೈತ
ಸದ್ಯ ಮಳೆ ಇರುವುದರಿಂದ ತಕ್ಷಣ ರಸ್ತೆ ಸಂಚಾರ ನಿರ್ಬಂಧಿಸಲಾಗುವುದು. ನಂತರ ತಡೆಗೋಡೆ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗುವುದು. ಯಾವುದೇ ರೀತಿಯ ಅಪಾಯವಾಗದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು.
- ಅಜೀತ ಬಿರಾದಾರ, ಎಇಇ, ಸಣ್ಣ ನೀರಾವರಿ ಇಲಾಖೆ, ಮುಧೊಳ
EndFragment