ಹೋಮ್ ಐಸೋಲೇಷನ್ ಬೇಡ

MDL 211
Published on

ಮುಧೋಳ: ಸೋಂಕು ಹರಡದಂತೆ ಮುಂಜಾಗ್ರತೆ ವಹಿಸಬೇಕು. ಪ್ರತಿ ಮನೆಯನ್ನು ಸಮೀಕ್ಷೆ ಮಾಡಿ ಸೋಂಕು ಲಕ್ಷಣ ಇದ್ದವರನ್ನು ಕೋವಿಡ್ ಕೇರ್ ಸೆಂಟರ್‌ದಲ್ಲಿ ದಾಖಲಿಸಬೇಕು ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

ನಗರದ ತಾಲೂಕು ಪಂಚಾಯಿತಿ ಸಭಾ ಭವನದಲ್ಲಿ ಕೋವಿಡ್ ನಿಯಂತ್ರಣ ಕುರಿತು ಶುಕ್ರವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಹೋಮ್ ಐಸೋಲೇಷನ್ ಬೇಡ. ಬಹಳಷ್ಟು ಮನೆಗಳಲ್ಲಿ ಒಂದೇ ಸ್ನಾನದ ರೂಮ್ ಹಾಗೂ ಶೌಚಗೃಹ ಇರುತ್ತವೆ. ಅಂಥವರನ್ನು ಕೋವಿಡ್ ಕೇರ್ ಸೆಂಟರ್‌ನಲ್ಲಿ ದಾಖಲಿಸುವುದರ ಮೂಲಕ ಸೋಂಕು ಹರಡದಂತೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.

ಜಿಲ್ಲೆಗೆ ಅಗತ್ಯವಿರುವ ಆಕ್ಸಿಜನ್ ಪೂರೈಕೆಯಾಗುತ್ತಿದೆ. ಮೂರನೇ ಅಲೆಯಲ್ಲಿ ಮಕ್ಕಳಿಗೆ ಮಾರಕವಾಗಲಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದು, ಅದಕ್ಕಾಗಿ ಜಿಲ್ಲಾಡಳಿತ ಎಲ್ಲ ರೀತಿಯಿಂದ ಸಜ್ಜಾಗಿರಬೇಕು. ಅಗತ್ಯ ಇರುವ ಔಷಧ, ಉಪಕರಣಗಳನ್ನು ತರಿಸಬೇಕು ಎಂದು ಹೇಳಿದರು.

ಜಿಲ್ಲಾಧಿಕಾರಿ ಕೆ.ರಾಜೇಂದ್ರ ಮಾತನಾಡಿ, ಕೋವಿಡ್ ಕಿಟ್‌ನ್ನು ರಾಜ್ಯದಲ್ಲಿ ಮೊದಲು ಬಾಗಲಕೋಟೆ ಜಿಲ್ಲೆ ಆರಂಭ ಮಾಡಲಾಗಿದೆ. ಸೋಂಕು ಇಳಿಮುಖವಾಗುತ್ತಿದೆ. ಮೂರನೇ ಅಲೆ ಎದುರಿಸಲು ಅಗತ್ಯವಿರುವ ಮಕ್ಕಳ ಆಕ್ಸಿಜನ್ ಮಾಸ್ಕ್ ಮುಂತಾದವುಗಳನ್ನು ಖರೀದಿಸುವ ಕಾರ್ಯ ನಡೆದಿದೆ. ಸರ್ಕಾರಿ ಆಸ್ಪತ್ರೆಯಲ್ಲಿ 456, ಖಾಸಗಿ ಆಸ್ಪತ್ರೆಯಲ್ಲಿ 867, ಕೋವಿಡ್ ಕೇರ್ ಸೆಂಟರ್‌ದಲ್ಲಿ 183 ಹಾಗೂ ಹೋಮ್ ಐಸೋಲೇಷನ್‌ನಲ್ಲಿ 4339 ಜನರು ಇದ್ದಾರೆ. ಒಟ್ಟು 5845 ಸಕ್ರಿಯ ಪ್ರಕರಣಗಳು ಇವೆ ಎಂದು ಹೇಳಿದರು.

ಜಿಲ್ಲೆಯಲ್ಲಿ 732 ಐಸೋಲೇಷನ್ ಬೆಡ್ ಇದ್ದು, ಇದರಲ್ಲಿ 257 ಬೆಡ್ ಭರ್ತಿಯಾಗಿವೆ. 475 ಬೆಡ್ ಖಾಲಿ ಇವೆ. 196 ಐಸಿಯು ಬೆಡ್ ಇದ್ದು, ಇದರಲ್ಲಿ 178 ಬೆಡ್ ಭರ್ತಿಯಾಗಿವೆ. 18 ಬೆಡ್ ಖಾಲಿ ಇವೆ. 104 ಐಸಿಯು ಸಹಿತ ವೆಂಟಿಲೇಟರ್ ಬೆಡ್ ಇದ್ದು, ಇದರಲ್ಲಿ 103 ಬೆಡ್ ಭರ್ತಿಯಾಗಿವೆ. 1 ಬೆಡ್ ಖಾಲಿ ಇದೆ. ಎಚ್‌ಡಿಯು 98 ಬೆಡ್ ಇದ್ದು, ಇದರಲ್ಲಿ 91 ಬೆಡ್ ಭರ್ತಿಯಾಗಿವೆ. 7 ಬೆಡ್ ಖಾಲಿ ಇವೆ. 743 ಆಕ್ಸಿಜನ್ ಬೆಡ್ ಇದ್ದು, ಇದರಲ್ಲಿ 699 ಬೆಡ್ ಭರ್ತಿಯಾಗಿವೆ. 44 ಬೆಡ್ ಖಾಲಿ ಇವೆ ಎಂದು ವಿವರಿಸಿದರು.

ಡಿಎಚ್‌ಒ ಡಾ.ಅನಂತ ದೇಸಾಯಿ ಮಾತನಾಡಿ, ಮುಧೋಳ ತಾಲೂಕಿನಲ್ಲಿ 5008 ಜನರಿಗೆ ಸೋಂಕು ತಗುಲಿದ್ದು, 4072 ಜನರು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. 866 ಸಕ್ರಿಯ ಪ್ರಕರಣಗಳು ಇದ್ದು, 40 ಜನ ಮರಣ ಹೊಂದಿದ್ದಾರೆ. ತಾಲೂಕಿನಲ್ಲಿ 53,035 ಜನರಿಗೆ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಮೊದಲ ಡೋಸ್ ಲಸಿಕೆ ಹಾಕಲಾಗಿದೆ. 5071 ಜನರಿಗೆ ಎರಡನೇ ಡೋಸ್ ನೀಡಲಾಗಿದೆ ಎಂದು ಹೇಳಿದರು.

ಎಸಿ ಡಾ.ಸಿದ್ದು ಹುಲ್ಲೋಳ್ಳಿ, ತಹಸೀಲ್ದಾರ್ ಸಂಗಮೇಶ ಬಾಡಗಿ, ತಾಪಂ ಇಒ ಕಿರಣ ಘೋರ್ಪಡೆ, ಟಿಎಚ್‌ಒ ಡಾ.ವೆಂಕಟೇಶ ಮಲಘಾಣ, ಸಿಎಂಒ ಡಾ.ಬಸವರಾಜ ಪಾಟೀಲ, ಪಿಡಬ್ಲುೃಡಿ ಎಇಇ ಸೋಮಶೇಖರ ಸಾವನ್, ಸಮಾಜಕಲ್ಯಾಣ ಅಧಿಕಾರಿ ಮೋಹನ ಕೊರಡ್ಡಿ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

Community-verified icon
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net