

ಪಡುಬಿದ್ರಿ: ಸಾರ್ವಜನಿಕರ ದೂರಿನ ಮೇರೆಗೆ ಮುದರಂಗಡಿ ಪೇಟೆಯಲ್ಲಿ ನಿರ್ಮಿಸಲಾದ ವೃತ್ತಕ್ಕೆ ಅಳವಡಿಸಿರುವ ಐವನ್ ಡಿಸೋಜ ನಾಮಫಲಕವನ್ನು ಶೀಘ್ರ ತೆರವುಗೊಳಿಸುವಂತೆ ಲೋಕೋಪಯೋಗಿ ಇಲಾಖೆ ಮುದರಂಗಡಿ ಗ್ರಾಪಂಗೆ ನೋಟಿಸ್ ನೀಡಿದೆ.
ಲೋಕೋಪಯೋಗಿ ಇಲಾಖೆಯಿಂದ ನಂದಿಕೂರು-ಶಿರ್ವ ಸಂಪರ್ಕ ರಸ್ತೆಯ ಮುದರಂಗಡಿ ಪೇಟೆ ಭಾಗದಲ್ಲಿ ಅಭಿವೃದ್ಧಿಪಡಿಸಿ ಇಲಾಖೆ ವತಿಯಿಂದ ವೃತ್ತ ನಿರ್ಮಿಸಲಾಗಿತ್ತು. ಈ ವೃತ್ತಕ್ಕೆ ಮುದರಂಗಡಿ ಗ್ರಾಪಂನಿಂದ ಮಾಜಿ ಎಂಎಲ್‌ಸಿ ಐವನ್ ಡಿಸೋಜ ಹೆಸರಿನ ನಾಮಫಲಕ ಅಳವಡಿಸಿದ್ದು, ಜುಲೈನಲ್ಲಿ ಐವನ್ ಡಿಸೋಜ ಉದ್ಘಾಟಿಸಿದ್ದರು.
ವೃತ್ತಕ್ಕೆ ಐವನ್ ಡಿಸೋಜ ನಾಮಫಲಕ ಅಳವಡಿಸಿರುವ ಬಗ್ಗೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿ ಲೋಕೋಪಯೋಗಿ ಇಲಾಖೆ, ಉಡುಪಿ ಜಿಲ್ಲಾಧಿಕಾರಿ ಸಹಿತ ಸಂಬಂಧಪಟ್ಟವರಿಗೆ ಪತ್ರ ಬರೆದು ಫಲಕ ತೆರವುಗೊಳಿಸುವಂತೆ ಒತ್ತಾಯಿಸಿದ್ದರು. ಈ ಬಗ್ಗೆ ಲೋಕೋಪಯೋಗಿ ಇಲಾಖೆ ಮುದರಂಗಡಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸೆಪ್ಟೆಂಬರ್‌ನಲ್ಲಿ ನೀಡಿರುವ ಪತ್ರದಲ್ಲಿ ಗ್ರಾಮಸ್ಥರ ದೂರಿನ ಹಿನ್ನೆಲೆಯಲ್ಲಿ ಮುದರಂಗಡಿ ಪೇಟೆಯಲ್ಲಿ ನಿರ್ಮಿಸಲಾದ ವೃತ್ತಕ್ಕೆ ಅಳವಡಿಸಿರುವ ಐವನ್ ಡಿಸೋಜ ವೃತ್ತ ಎಂಬ ಫಲಕ ಕೂಡಲೇ ತೆರವುಗೊಳಿಸುವಂತೆ ಹಾಗೂ ಫಲಕ ಅಳವಡಿಸಿರುವುದರಿಂದ ಜನಸಮಾನ್ಯರಿಗೆ ತಪ್ಪು ಸಂದೇಶ ನೀಡಿದಂತಾಗುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು.
ಪತ್ರ ಬರೆದರೂ ಫಲಕ ತೆರವುಗೊಳಿಸದಿರುವ ಬಗ್ಗೆ ಮತ್ತೆ ಗ್ರಾಮಸ್ಥರು ದೂರಿದ್ದರು. ಅಕ್ಟೋಬರ್ 9ರಂದು ಮತ್ತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಮತ್ತೆ ಪತ್ರ ಬರೆದಿದ್ದು, ನಾಮಫಲಕ ತೆರವುಗೊಳಿಸದಿದ್ದಲ್ಲಿ ಸೂಕ್ತ ಕ್ರಮಕ್ಕೆ ಮೇಲಾಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.