ತಾಲೂಕು ಕೇಂದ್ರವಾಗಿ ಮುದಗಲ್- ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಭರವಸೆ

291222 Mudgal JDS Minority Convention
ಮುದಗಲ್‌ನಲ್ಲಿ ಜೆಡಿಎಸ್ ಪಕ್ಷದಿಂದ ಏರ್ಪಡಿಸಲಾಗಿದ್ದ ಅಲ್ಪಸಂಖ್ಯಾತರ ಸಮಾವೇಶವದಲ್ಲಿ ರಾಜ್ಯ ಅಧ್ಯಕ್ಷ ಸಿಎಂ ಇಬ್ರಾಹಿಂ ಬುಧವಾರ ಮಾತನಾಡಿದರು.
Published on

ಮುದಗಲ್: ರಾಜ್ಯದ ಮುಖ್ಯಮಂತ್ರಿ ಯಾರು ಆಗಬೇಕು ಎಂಬ ಸ್ಪಷ್ಟ ನಾಯಕತ್ವದ ನಿಲುವು ಇಲ್ಲದ ಕಾಂಗ್ರೆಸ್ ಮತ್ತು ಬಿಜೆಪಿಗೆ ಚುನಾವಣೆ ಸಮೀಪಿಸುತಿದ್ದಂತೆ ದಿಕ್ಕು ತೋಚದಂತಾಗಿದೆ ಎಂದು ಜೆಡಿಎಸ್ ರಾಜ್ಯ ಅಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿದರು.

ಪಟ್ಟಣದಲ್ಲಿ ಜೆಡಿಎಸ್ ಪಕ್ಷದಿಂದ ಏರ್ಪಡಿಸಲಾಗಿದ್ದ ಅಲ್ಪಸಂಖ್ಯಾತರ ಸಮಾವೇಶವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು. ಕೇವಲ ಹಿಂದುತ್ವ ಎಂದು ಚುನಾವಣೆಗೆ ಬರುತ್ತಿರುವ ಬಿಜೆಪಿ, ಅಲ್ಪಸಂಖ್ಯಾತರನ್ನು ಎರಡನೆ ದರ್ಜೆ ಪ್ರಜೆಗಳನ್ನಾಗಿ ಕಾಣುತ್ತಿದೆ. ಮತ್ತೊಂದು ಕಡೆ ಮುಸ್ಲಿಮಗೆ ಯಾವುದೆ ಅಧಿಕಾರ ನೀಡದೆ ವೋಟ್ ಬ್ಯಾಂಕಿನಂತೆ ಭಾವಿಸಿದೆ. ಇಂಥವರಿಂದ ಸಮುದಾಯ ಅಭಿವೃದ್ಧಿ ಸಾಧ್ಯವಿಲ್ಲ ಎಂದರು.

ಭ್ರಷ್ಟಾಚಾರದಲ್ಲಿಯೇ ದೇಶಕ್ಕೆ ಕಳಂಕ ತಂದ ಬಿಜೆಪಿ ಆಡಳಿತ ಶೇ.40 ಕಮೀಷನ್ ಪಡೆಯುವುದೆ ಸಾಧನೆ ಮಾಡಿದೆ. ಕೋವಿಡ್ ನೆಪದಲ್ಲಿ ಕೋಟಿ ಕೋಟಿ ಹಣ ಲೂಟಿ ಮಾಡಿದ ಬಿಜೆಪಿ ಸರ್ಕಾರ ನಾಗರಿಕರ ಕಷ್ಟಕ್ಕೆ ಸ್ಪಂದಿಸದೆ ಭ್ರಷ್ಟಾಚಾರ ಮರೆ ಮಾಡುತ್ತಿದೆ. ಮಾತೆತ್ತಿದರೆ ಅಹಿಂದ ಪರ ಎಂದು ಹೇಳುವ ಕಾಂಗ್ರೆಸ್ ಅಲ್ಪಸಂಖ್ಯಾತರ ಬೆನ್ನಿಗೆ ನಿಲ್ಲದೆ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡುತ್ತಿದೆ. ಅಲ್ಪಸಂಖ್ಯಾತರ ಪರ ನಿಂತು, ಅವರಿಗೆ ಶಕ್ತಿ ತುಂಬಿದ್ದು ಎಚ್.ಡಿ.ಕುಮಾರ ಸ್ವಾಮಿ. ಈ ಭಾಗದ ನೀರಾವರಿ ಸೌಲಭ್ಯ ಕಲ್ಪಿಸಿದ್ದ ಮಾಜಿ ಪ್ರದಾನಿ ದೇವೇಗೌಡರು. ಇದರಿಂದಾಗಿಯೇ ಜಿಲ್ಲೆಯ ದೇವದುರ್ಗದಲ್ಲಿ ರೈತರು ದೇವೇಗೌಡರ ಮೂರ್ತಿಯನ್ನು ನಿರ್ಮಿಸಿರುವುದೆ ಸಾಕ್ಷಿ. ರಾಜ್ಯದಲ್ಲಿ ಜೆಡಿಎಸ್ ಸರ್ಕಾರ ಬಂದ ಕೂಡಲೆ ಮುದಗಲ್ ಪಟ್ಟಣವನ್ನು ತಾಲೂಕ ಕೇಂದ್ರವನ್ನಾಗಿ ಮಾಡುವುದು ಹಾಗೂ ಐತಿಹಾಸಿಕ ಕೋಟೆ ಉತ್ಸವ ಮಾಡುವುದಾಗಿ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಲಿಂಗಸುಗೂರು ವಿಧಾನ ಸಭೆ ಕ್ಷೇತ್ರದ ಜೆಡಿಎಸ್ ನಿಯೊಜಿತ ಅಭ್ಯರ್ಥಿ ಸಿದ್ದು ಬಂಡಿ ಮಾತನಾಡಿದರು. ಇದೆ ವೇಳೆ ಗ್ರಾಮೀಣ ಭಾಗದ ನೂರಾರು ಯುವಕರು ವಿವಿಧ ಪಕ್ಷಗಳನ್ನು ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು. ಪಕ್ಷದ ಜಿಲ್ಲಾ ಅಧ್ಯಕ್ಷ ಎಂ.ವಿರೂಪಾಕ್ಷ, ರಾಜ್ಯ ಮಹಿಳಾ ಘಟಕ ಉಪಾಧ್ಯಕ್ಷೆ ಮುತ್ತಮ್ಮ, ತಾಲೂಕು ಕಾರ್ಯಾಧ್ಯಕ್ಷ ಗೋವಿಂದ ಅಮ್ಮಾಪುರು, ಮುದಗಲ್ ಘಟಕ ಅಧ್ಯಕ್ಷ ಅಮೀರ್ ಬೇಗ್ ಉಸ್ತಾದ್, ಪುರಸಭೆ ಸದಸ್ಯರಾದ ದುರುಗಪ್ಪ ಕಟ್ಟಿಮನಿ, ಮೈಬೂಬಸಾಬ ಕಟ್ಟಿಪುಡ್ಡಿ, ಯುವ ಘಟಕ ಅಧ್ಯಕ್ಷ ಅನ್ವರ್ ಮೀಯಾ ಕಂದಗಲ್, ಪುರಸಭೆ ಮಾಜಿ ಅಧ್ಯಕ್ಷ ರಜ್ಜಬ ಅಲಿ ಟಿಂಗ್ರಿ, ಅರುಣ ಕುಮಾರ ಯರದಿಹಾಳ, ಸಿದ್ದಯ್ಯ ಹೊರಪೇಟೆ, ಹುಲುಗಪ್ಪ ಗುರುಗುಂಟಾ ಇದ್ದರು.

ವೋಟ್ ಬ್ಯಾಂಕ್ ರೀತಿ ಬಳಸಿ ಅಲ್ಪಸಂಖ್ಯಾತರಿಗೆ ಅಧಿಕಾರ ನೀಡದೆ ದೂರ ಇಟ್ಟಿರುವ ಕಾಂಗ್ರೆಸ್ ಮತ್ತು ಬಿಜೆಪಿಗೆ ಈ ಸಲ ಪಾಠ ಕಲಿಸಬೇಕಾಗಿದೆ. ಮಾಜಿ ಪ್ರಧಾನಿ ದೇವೇಗೌಡರು ಅಲ್ಪಸಂಖ್ಯಾತರಿಗೆ ಶೇ.4ಮೀಸಲಾತಿ ಕಲ್ಪಿಸದಿದ್ದರೆ ಇಂದು ವಿವಿಧ ಕ್ಷೇತ್ರಗಳಲ್ಲಿ ಮುಸ್ಲಿಮರು ಅವಕಾಶ ವಂಚಿತರಾಗುತ್ತಿದ್ದರು. ಸದ್ಯದ ಪರಿಸ್ಥಿತಿಯಲ್ಲಿ ಅಲ್ಪಸಂಖ್ಯಾತರು ರಾಜ್ಯದಲ್ಲಿ ಅತ್ಯಂತ ಕಷ್ಟ ಅನುಭವಿಸುತ್ತಿದ್ದಾರೆ. ಬಿಜೆಪಿ ಸರ್ಕಾರ ಮುಸ್ಲಿಮರ ಶಕ್ತಿ ಕಡಿಮೆ ಮಾಡಲು ಹೊರಟಿದೆ| ನಜ್ಮಾ, ಜೆಡಿಎಸ್ ಪಕ್ಷದ ಅಲ್ಪ ಸಂಖ್ಯಾತರ ವಕ್ತಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net