ಆರು ತಿಂಗಳಾದರೂ ಪಾವತಿ ಆಗದ ಸಹಾಯಧನ - ದನದ ಶೆಡ್ ನಿರ್ಮಿಸಿಕೊಂಡವರ ಅಳಲು

mdl-2
ತಲೇಖಾನ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಫಲಾನುಭವಿಗಳು ನಿರ್ಮಿಸಿಕೊಂಡ ದದನ ಶೆಡ್.
Published on

ಮುದಗಲ್: ಸಮೀಪದ ತಲೇಖಾನ್ ಗ್ರಾಪಂ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಫಲಾನುಭವಿಗಳು ದನದ ಶೆಡ್ ನಿರ್ಮಿಸಿಕೊಂಡು ಆರು ತಿಂಗಳು ಕಳೆದರೂ ಸಹಾಯಧನ ಪಾವತಿಯಾಗದ ಕಾರಣ ತಾಪಂ, ಗ್ರಾಪಂ ಕಚೇರಿಗಳಿಗೆ ಅಲೆಯುವಂತಾಗಿದೆ.

ತಲೇಖಾನ್ ಗ್ರಾಪಂ ಅಧಿಕಾರಿಗಳು ಪ್ರತಿ ವಾರ್ಡ್‌ನಲ್ಲಿ ಗ್ರಾಮಸಭೆ ನಡೆಸಿ ಖಾತ್ರಿ ಯೋಜನೆಯಡಿ ಜನರ ಬೇಡಿಕೆ ಅನುಸಾರ ಕಾಮಗಾರಿಗಳನ್ನು ಕೈಗೊಳ್ಳಬೇಕು. ನರೇಗಾ ನಿಯಮ ಅನುಸಾರ 2023-24ರಲ್ಲಿ 110 ಹಾಗೂ 2024-25ರಲ್ಲಿ 30 ದನದ ಶೆಡ್ ಮಂಜೂರು ಮಾಡಲಾಗಿತ್ತು.

ನಂತರ ಫಲಾನುಭವಿಗಳು ಶೆಡ್‌ಗಳನ್ನು ನಿರ್ಮಿಸಿಕೊಂಡಿದ್ದಾರೆ. ಆದರೆ, ಸಹಾಯಧನ ಬಿಡುಗಡೆ ಮಾತ್ರ ವಿಳಂಬವಾಗುತ್ತಿದೆ. ಪ್ರತಿಯೊಂದಕ್ಕೆ 57 ಸಾವಿರ ರೂ. ಸಹಾಯಧನ ನೀಡಲಾಗುತ್ತದೆ. ಗ್ರಾಪಂ ವ್ಯಾಪ್ತಿಯಲ್ಲಿ 140 ಫಲಾನುಭವಿಗಳು ದನದ ಶೆಡ್ ನಿರ್ಮಿಸಿಕೊಂಡಿದ್ದು, 79.80 ಲಕ್ಷ ರೂ. ಪಾವತಿಸಬೇಕು.

ಆದರೆ, ಈವರೆಗೆ 8.03 ಲಕ್ಷ ರೂ. ಮಾತ್ರ ನೀಡಿದ್ದು, 71.77 ಲಕ್ಷ ರೂ. ಬಾಕಿ ಉಳಿಸಿಕೊಳ್ಳಲಾಗಿದೆ. ಶೆಡ್ ನಿರ್ಮಿಸಿಕೊಂಡ ಕೆಲ ಫಲಾನುಭವಿಗಳಿಗೆ ಜನವರಿಯಲ್ಲಿ ಕೂಲಿ ಹಣ 11 ಸಾವಿರ ಮಾತ್ರ ಪಾವತಿಯಾಗಿದ್ದು, ಬಾಕಿ ಹಣ ಬಿಡುಗಡೆ ಮಾಡಿಲ್ಲ.

ನರೇಗಾ ಇಂಜಿನಿಯರ್ ಎಂಬಿ ದಾಖಲಿಸಿ, ಸಾಮಗ್ರಿ ಖರೀದಿಸಿದ ರಸೀದಿ ಸೇರಿದಂತೆ ಅಗತ್ಯ ದಾಖಲೆಗಳನ್ನು ಗೂಗಲ್ ಶೀಟ್‌ನಲ್ಲಿ ನಮೂದಿಸಿ ಜಾಬ್‌ಕಾರ್ಡ್ ಮುಖ್ಯಸ್ಥನ ಹೆಸರಲ್ಲಿ ಎಫ್‌ಟಿಒ ಮಾಡಿದಾಗ ಮಾತ್ರ ಫಲಾನುಭವಿಗಳಿಗೆ ಹಣ ಲಭಿಸುತ್ತದೆ.

ಆದರೆ, ಇಲ್ಲಿ 140 ಜಾನುವಾರುದಾರರು ಸಾವಿರಾರು ರೂ. ಖರ್ಚು ಮಾಡಿ ಶೆಡ್ ನಿರ್ಮಿಸಿಕೊಂಡಿದ್ದಾರೆ. ಕಾಮಗಾರಿ ಪೂರ್ಣಗೊಂಡು ಆರು ತಿಂಗಳು ಗತಿಸಿದರೂ ಹಣ ಜಮೆ ಆಗಿಲ್ಲ ಎಂದು ಫಲಾನುಭವಿಗಳಾದ ಸಂತೋಷ, ಮೇಗಪ್ಪ, ಶಂಕ್ರಪ್ಪ ಅಲವತ್ತುಕೊಂಡಿದ್ದಾರೆ.

ಅಧಿಕಾರಿಗಳ ಇಚ್ಛಾಶಕ್ತಿ ಕೊರತೆ

ಫಲಾನುಭವಿಗಳು ದನದ ಶೆಡ್ ನಿರ್ಮಿಸಿಕೊಂಡು ಆರು ತಿಂಗಳು ಗತಿಸಿವೆ. ಅಧಿಕಾರಿಗಳ ಇಚ್ಛೆಯ ಕೊರತೆಯಿಂದ ಸಹಾಯಧನ ಪಾವತಿ ತಡವಾಗುತ್ತಿದೆ ಎಂಬ ಆರೋಪವಿದೆ. ಕಾಮಗಾರಿ ನಿರ್ವಹಣೆ ಮಾಡಿ ಅಗತ್ಯ ದಾಖಲೆಗಳನ್ನು ಗ್ರಾಪಂಗೆ ನೀಡಿದರೂ ಅಲೆದಾಡುವುದು ತಪ್ಪಿಲ್ಲ. ಸರ್ಕಾರದ ನಿರ್ದೇಶನದಂತೆ ಶೇಡ್ ನಿರ್ಮಿಸಿಕೊಂಡಿದ್ದು, ಶೀಘ್ರವೇ ಅನುದಾನ ಬಿಡುಗಡೆಗೊಳಿಸಿ ಎಂದು ಅಧಿಕಾರಿ ವರ್ಗ ಮತ್ತು ಗ್ರಾಪಂ ಆಡಳಿತ ಮಂಡಳಿ ಮುಂದೆ ಫಲಾನುಭವಿಗಳು ಅಂಗಾಲಾಚುವಂತಾಗಿದೆ. ಈಗಲಾದರೂ ಅಧಿಕಾರಿಗಳು ಗಮನಹರಿಸುತ್ತಾರಾ ಎಂಬುದನ್ನು ಕಾದು ನೊಡಬೇಕಿದೆ.

===

ತಲೇಖಾನ್ ಗ್ರಾಪಂ ಪಿಡಿಒ ಮತ್ತು ಇಂಜಿಯರ್‌ಗಳು ಕೆಲಸ ಮಾಡಲು ಮುಂದೆ ಬರುತ್ತಿಲ್ಲ. ಆದ್ದರಿಂದ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಲು ತೊಂದರೆಯಾಗಿದೆ. ಫಲಾನುಭವಿಗಳಿಗೆ ಶೆಡ್ ನಿರ್ಮಾಣದ ದಾಖಲಾತಿಗಳನ್ನು ಇಲಾಖೆಗೆ ಸಲ್ಲಿಸಲು ತಿಳಿಸಿದ್ದು, ತ್ವರಿತವಾಗಿ ಅನುದಾನ ಬಿಡುಗಡೆ ಮಾಡಲಾಗುವುದು.

ಶಿವಾನಂದ ರಡ್ಡಿ, ಸಹಾಯಕ ನಿರ್ದೇಶಕ (ನರೇಗಾ), ತಾಪಂ, ಮಸ್ಕಿ

===

ದನದ ಶೆಡ್ ಮಂಜೂರಾತಿ ಪಡೆಯಲು ಬೆಂಗಳೂರಿನ ಕಚೇರಿವರೆಗೂ ಅಲೆದು ಸಾಕಾಗಿತ್ತು. ಈಗ ಶೆಡ್ ನಿರ್ಮಿಸಿಕೊಂಡ ಫಲಾನುಭವಿಗಳಿಗೆ ಬಿಲ್ ನೀಡಲು ಅಧಿಕಾರಿಗಳು ಸತಾಯಿಸುತ್ತಿದ್ದಾರೆ.

ಮಾನಸಿಂಗ್ ರಾಠೋಡ್, ಸದಸ್ಯ, ಗ್ರಾಪಂ, ತಲೇಖಾನ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net