

ಮುದಗಲ್: ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಲ್ಲಿ ವ್ಯಕ್ತಿ ಎತ್ತರಕ್ಕೆ ಬೆಳೆಯಲು ಸಾಧ್ಯ ಎಂದು ತಿಮ್ಮಾಪುರ ಕಲ್ಯಾಣಾಶ್ರಮದ ಮಹಾಂತ ಸ್ವಾಮೀಜಿ ಹೇಳಿದರು.
ಪಟ್ಟಣದ ಕಿಲ್ಲಾ ಶ್ರೀ ರಾಮಲಿಂಗೇಶ್ವರ ಜಾತ್ರೆ, ಶ್ರೀಶೈಲ ಪಾದಯಾತ್ರಿಗಳ ದಾಸೋಹದ ರಜತ ಮಹೋತ್ಸವ ನಿಮಿತ್ತ ದೇವಸ್ಥಾನ ಆವರಣದಲ್ಲಿ ಹಮ್ಮಿಕೊಂಡಿದ್ದ ಕಲಬುರಗಿ ಶರಣಬಸವೇಶ್ವರ ಪುರಾಣ ಪ್ರವಚನದಲ್ಲಿ ಮಂಗಳವಾರ ಮಾತನಾಡಿದರು.
ಚಿಕ್ಕದಾಗಿ ಆರಂಭವಾದ ಶ್ರೀಶೈಲ ಪಾದಯಾತ್ರಿಗಳ ದಾಸೋಹ ಸೇವೆ, ಇಂದು ಸಹಸ್ರಾರು ಭಕ್ತರು ಆಗಮಿಸುತ್ತಿರುವುದು ಹೆಮ್ಮೆಯ ಸಂಗತಿ. ಲೋಕದ ಒಳಿತಿಗೆ ರಾಚೋಟೇಶ್ವರ ಶ್ರೀಗಳು ಶಿವಯೋಗ ಸಮಾಧಿ ನಡೆಸುತ್ತಿರುವುದು ಸುಯೋಗವಾಗಿದೆ. ಮನುಷ್ಯ ಒಳ್ಳೆಯದನ್ನು ಮಾಡುತ್ತಿರಬೇಕು. ದಾಸೋಹ ಜಾತ್ರೆಯ ಪರಿಕಲ್ಪನೆ ಅನ್ನಕ್ಕಷ್ಟೇ ಆಗದೆ, ಜ್ಞಾನಕ್ಕೂ ವಿಸ್ತರಣೆಗೊಳ್ಳಬೇಕಿದೆ ಎಂದರು.
ದೇವಸ್ಥಾನ ಸಮಿತಿ ಅಧ್ಯಕ್ಷ ಸುರೇಶಗೌಡ ಪಾಟೀಲ್ ಆದಾಪುರ, ಮಹೇಶ ಸ್ವಾಮಿ ವಸ್ತ್ರದ್, ಲಿಂಗಪ್ಪ ಹಣಿಗಿ, ವಿಶ್ವನಾಥ ದೇಸಾಯಿ, ಅನಿಲಕುಮಾರ ಬುಶೆಟ್ಟಿ, ಚಂದ್ರಶೇಖರ ಗಂಗಾವತಿ, ಶಿವಪ್ಪ ಸುಂಕದ್, ಉದಯಕುಮಾರ ಕಮ್ಮಾರ, ಶರಣಪ್ಪ ಕಗ್ಗಲ್ ಇತರರಿದ್ದರು.