

ಮುದಗಲ್: ಪಟ್ಟಣದ ನಗರೇಶ್ವರ ದೇಗುಲದ ಸಭಾಂಗಣದಲ್ಲಿ ಅಯೋಧ್ಯೆ ರಾಮ ಮಂದಿರ ಹಾಗೂ ಬಾಲರಾಮನ ಮಾದರಿಯ ಸ್ತಬ್ಧಚಿತ್ರದ 82 ನೇ ಪ್ರದರ್ಶನವು ಭಾನುವಾರ ಸಂಜೆ ಶ್ರದ್ಧಾಭಕ್ತಿಯಿಂದ ಸಂಪನ್ನಗೊಂಡಿತು.
ಈ ಕುರಿತು, ಮಾದರಿಯ ರಚನಕಾರ ತುಮಕೂರಿನ ವಿನಯರಾಮ ಪ್ರತಿಕ್ರಿಯಿಸಿ, ಅಯೋಧ್ಯೆ ರಾಮ ಮಂದಿರ ಹಾಗೂ ಬಾಲರಾಮನ ಮಾದರಿ ಪ್ರದರ್ಶನದ ಹಿಂದೆ ಸನಾತನ ಧರ್ಮದ ಅರಿವು ಮೂಡಿಸುವ ಪ್ರಯತ್ನ ಇದೆ.
ರಾಮಾವತಾರದ ಉದ್ದೇಶವು ಧರ್ಮ, ಶಿಕ್ಷಣ, ಆತ್ಮಜ್ಞಾನದ ಉಪದೇಶವಾಗಿತ್ತು. ರಾಮನ ಆದರ್ಶ ಗುಣಗಳು ಯಾವುದೇ ಜಾತಿ, ಧರ್ಮಕ್ಕೆ, ಪಕ್ಷಕ್ಕೆ ಸೀಮಿತವಲ್ಲ. ಸೂರ್ಯ ಎಲ್ಲರಿಗೂ ಬೆಳಕು ಕೊಟ್ಟಂತೆ ಸೂರ್ಯವಂಶದ ರಾಮನ ಆದರ್ಶ ಎಲ್ಲರಿಗೂ ಬೇಕು.
ಸಮಾನತೆ ಹಂಚುವಲ್ಲಿ ಪಂಚತತ್ವದ ಪಾತ್ರ ಮುಖ್ಯವಾಗಿದೆ. ಹೀಗಾಗಿ ಅಯೋಧ್ಯೆಗೆ ಹೋಗಲಾಗದ ವೃದ್ಧರು, ಬಡವರು ಇದ್ದಲ್ಲಿಯೇ ರಾಮಮಂದಿರ ಹಾಗೂ ಬಾಲರಾಮನ ಮಾದರಿ ನೋಡುವ ಸೌಭಾಗ್ಯ ಕಲ್ಪಿಸಲಾಗುತ್ತಿದೆ ಎಂದರು.
ವಿನ್ಯಾಸ: ರಾಮ ಮಂದಿರ ಹಾಗೂ ಬಾಲರಾಮನ ಮಾದರಿಯು 80 ಕೆ.ಜಿ ತೂಕವಿದ್ದು, ಇದನ್ನು ವಿನಯರಾಮ ಅವರು, ಲೈಟಿಂಗ್, ಥರ್ಮಾಕೋಲ್, ಟೂತ್ ಪಿಕ್, ಅರ್ಕಾಲಿಕ್ ವಾಟರ್ ಪೇಂಟ್, ಗುಂಡು ಸೂಜಿ ಹಾಗೂ ಫೆವಿಕಾಲ್ ಬಳಸಿ ಸಿದ್ಧಪಡಿಸಿದ್ದಾರೆ. ಉಚಿತವಾಗಿ 108 ಕಡೆ ಪ್ರದರ್ಶನ ನೀಡುವ ಸಂಕಲ್ಪವಿದ್ದು, ಮೈಸೂರಿನ ನೋಟು ಮುದ್ರಣ ಸಂಸ್ಥೆಯಲ್ಲಿ, ಶೃಂಗೇರಿಯ ಮಠದಲ್ಲಿ, ಮಂತ್ರಾಲಯದಲ್ಲಿ, ಹೀಗೆ ರಾಜ್ಯದ ಪ್ರಮುಖ ಸ್ಥಳಗಳಲ್ಲಿ ಭಾಗಗಳಲ್ಲಿ ಪ್ರದರ್ಶನಗೊಂಡಿದೆ.