

ಮುದಗಲ್: ಪಟ್ಟಣ ಸೇರಿ ಸುತ್ತಲಿನ ಗ್ರಾಮೀಣ ಭಾಗಗಳಲ್ಲಿ ಹೊಸ ವರ್ಷವನ್ನು ಕೇಕ್ ಕತ್ತರಿಸುವ ಮೂಲಕ ಸ್ವಾಗತಿಸಲಾಯಿತು. ಮಂಗಳವಾರ ರಾತ್ರಿ ಗಲ್ಲಿ ಗಲ್ಲಿಗಳಲ್ಲಿ ಮಕ್ಕಳು, ಯುವಕರು ಮಹಿಳೆಯರು ಡಿಜೆ ಹಾಡಿಗೆ ಹೆಜ್ಜೆ ಹಾಕಿದರು. ಯುವಕರು ರಸ್ತೆಯುದ್ದಕ್ಕೂ ಪಟಾಕಿಗಳನ್ನು ಸಿಡಿಸಿ ಸಿಹಿ ಹಂಚಿ ಶುಭ ಕೋರಿದರು.
ಬುಧವಾರ ಬೆಳಿಗ್ಗೆ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಬಗೆಬಗೆಯ ಕೇಕ್ ಖರೀದಿಸಿ ನೆಚ್ಚಿನ ಶಿಕ್ಷಕರೊಂದಿಗೆ ಹೊಸ ವರ್ಷವನ್ನು ಆಚರಿಸಿದರು. ಅಲ್ಲದೆ ಪಟ್ಟಣದ ರಾಮಲಿಂಗೇಶ್ವರ ದೇವಸ್ಥಾನ, ನಗರೇಶ್ವರ ದೇವಸ್ಥಾನ, ನೀಲಕಂಠೇಶ್ವರ ದೇವಸ್ಥಾನ ಹಾಗೂ ಸಮೀಪದ ಛತ್ತರ ಗ್ರಾಮದ ಆಂಜನೇಯ ದೇವಾಲಯ ಹಾಗೂ ಸುಕ್ಷೇತ್ರ ಸಜ್ಜಲಗುಡ್ಡ, ಅಂಕಲಿಮಠದಲ್ಲಿ ಭಕ್ತರು ಇಷ್ಟಾರ್ಥ ಸಿದ್ಧಿಗಾಗಿ ಪೂಜೆ, ಪ್ರಾರ್ಥನೆ ಸಲ್ಲಿಸಿದರು.