

ಮುದಗಲ್: ಪಟ್ಟಣದಲ್ಲಿ ಕುಡಿವ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತಿರುವುದಕ್ಕೆ ಪುರಸಭೆ ಅಧಿಕಾರಿಗಳು ಹಾಗೂ ಆಡಳಿತ ವರ್ಗವೇ ನೇರ ಹೊಣೆ ಎಂದು ಪುರಸಭೆ ಸದಸ್ಯ ಗುಂಡಪ್ಪ ಗಂಗಾವತಿ ಆರೋಪಿಸಿದರು.
ಪಟ್ಟಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಶಾಸಕ ಮಾನಪ್ಪ ವಜ್ಜಲ್ ಅವರು ಶನಿವಾರ ಪುರಸಭೆಯ ಘನತ್ಯಾಜ್ಯ ವಿಲೇವಾರಿ ವಾಹನಗಳ ಉದ್ಘಾಟನೆಗೆ ಆಗಮಿಸಿದ ವೇಳೆ ದಲಿತ ಸಂಘಟನೆ ಪದಾಧಿಕಾರಿಗಳು ಮುತ್ತಿಗೆ ಹಾಕಿ ಮಾಡಿದ ಆರೋಪಗಳು ಸತ್ಯಕ್ಕೆ ದೂರವಾಗಿದ್ದು, ಕ್ಷೇತ್ರದ ಅಭಿವೃದ್ಧಿಗೆ ಶಾಸಕರು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಿದ್ದಾರೆ ಎಂದರು.
ಕುಡಿವ ನೀರಿನ ಸಮಸ್ಯೆ ಕುರಿತು ಪುರಸಭೆ ಆಡಳಿತ ಶಾಸಕರ ಗಮನಕ್ಕೆ ತಂದಿಲ್ಲ. ಶೀಘ್ರದಲ್ಲಿ ಕುಡಿವ ನೀರಿನ ಸಮಸ್ಯೆ ಬಗೆಹರಿಸಲಿದ್ದು, ಕೆಕೆಆರ್‌ಡಿಬಿ ಯೋಜನೆಯಡಿ ಒಂದು ಕೋಟಿ ರೂ. ನೀಡುವುದಾಗಿ ಭರವಸೆ ಕೊಟ್ಟಿದ್ದಾರೆ. ಪಟ್ಟಣದಲ್ಲಿ ನೀರು ಶೇಖರಿಸಲು ನೀರು ಸಂಗ್ರಹಣಾ ಟ್ಯಾಂಕ್ ಕೊರತೆ ಇದ್ದು, ಈಗಾಗಲೇ ಪುರಸಭೆ ವಿವಿಧ ಅನುದಾನದಲ್ಲಿ ನಿರ್ಮಾಣಕ್ಕೆ ಹಣ ಮೀಸಲಿರಿಸಿದ್ದು, 60 ಲಕ್ಷ ರೂ. ಕೊರತೆಯಾದ ಹಿನ್ನೆಲೆಯಲ್ಲಿ ಶಾಸಕರಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದ ಅವರು, ಮೇ 13ರಂದು ಕರವೇ ಕರೆ ನೀಡಿರುವ ಮುದಗಲ್ ಬಂದ್‌ಗೆ ಬೆಂಬಲ ನೀಡುವುದಾಗಿ ತಿಳಿಸಿದರು.
ಬಿಜೆಪಿ ನಗರ ಘಟಕಾಧ್ಯಕ್ಷ ಕರಿಯಪ್ಪ ಯಾದವ್, ಮುಖಂಡರಾದ ಉದಯ ಕುಮಾರ, ಮಲ್ಲಪ್ಪ ಹೂಗಾರ, ಶರಣಪ್ಪ ಹಂಚಿನಾಳ, ವೆಂಕಟೇಶ ಹಿರೇಮನಿ, ನಾಗರಾಜ ತಳವಾರ, ಮೋಹನ ಭಂಡಾರಿ, ರವಿ ಕಟ್ಟಿಮನಿ, ಗದ್ದೆಪ್ಪ ಜಕ್ಕೇರಮಡು, ಮಲ್ಲಪ್ಪ ಮಾಟೂರು ಇತರರಿದ್ದರು.