ಮೊಹರಂ ಆಚರಣೆಗೆ ಮೂಲಸೌಕರ್ಯ ಕಲ್ಪಿಸಿ

mdl03
ಮುದಗಲ್ ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷೆ ಮಹಾದೇವಮ್ಮ ಗುತ್ತೇದಾರ್ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ಜರುಗಿತು. ಸದಸ್ಯರಾದ ಶಿವಗ್ಯಾನಪ್ಪ, ಶಬ್ಬೀರ್ ಪಾಷಾ, ಬಾಬು ಉಪ್ಪಾರ, ಜಯಶ್ರೀ ಜೀಡಿ, ರಾಬಿಯಾ ಬೇಗಂ, ಅಮೀನಾಬೇಗಂ, ಮಹಾಲಕ್ಷ್ಮೀ ಯಾದವ್, ಅಮೀನಾಬೇಗಂ, ಹಾಗೂ ಪುರಸಭೆ ಸಿಬ್ಬಂದಿ ಇದ್ದರು.
Published on

ಮುದಗಲ್: ಐತಿಹಾಸಿಕ ಮುದಗಲ್ ಮೊಹರಂ ಹಬ್ಬ ಅದ್ದೂರಿ ಆಚರಣೆಗೆ ಇಲ್ಲಿನ ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷೆ ಮಹಾದೇವಮ್ಮ ಗುತ್ತೇದಾರ್ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದರು.

ಪುರಸಭೆ ಮುಖ್ಯಾಧಿಕಾರಿ ಪ್ರವೀಣ ಭೋಗಾರ, ಸಭೆಯ ನಡವಳಿ ಮಂಡಿಸಿ, ನಗರ ಮತ್ತು ಗ್ರಾಮಾಂತರ ಯೋಜನೆ ಇಲಾಖೆಯಿಂದ ಅನುಮೋದನೆಗೊಂಡ 11 ಫಲಾನುಭವಿಗಳ ಒಟ್ಟು 29 ಎಕರೆ ಪ್ರದೇಶಕ್ಕೆ ವಾಣಿಜ್ಯ ಹಾಗೂ ವಾಸದ ಉದ್ದೇಶದ ನಿವೇಶನಗಳಿಗೆ ಆಡಳಿತಾತ್ಮಕ ಮಂಜೂರಾತಿ ನೀಡುವ ವಿಷಯ ಮಂಡಿಸುತ್ತಿದ್ದಂತೆ ಸದಸ್ಯರಾದ ಎಸ್.ಆರ್.ರಸೂಲ್ ಹಾಗೂ ಗುಂಡಪ್ಪ ಗಂಗಾವತಿ ವಿರೋಧಿಸಿ, ಇಲಾಖೆ ನಿಯಮ ಪ್ರಕಾರ ಲೇಔಟ್ ಅಭಿವೃಧ್ಧಿ ಪಡಿಸುವವರೆಗೂ ನಿವೇಶನ ನೀಡದಿರಿ ಎಂದು ತಾಕೀತು ಮಾಡಿದಾಗ ಆಡಳಿತಾತ್ಮಕ ಮಂಜೂರಾತಿಗೆ ತಡೆಹಿಡಿಯಲಾಯಿತು.

ಮೊಹರಂ ಅದ್ದೂರಿ ಆಚರಣೆ: ಐತಿಹಾಸಿಕ ಮುದಗಲ್ ಮೊಹರಂ ಹಬ್ಬವು ಸಮೀಪಿಸುತ್ತಿದ್ದು, ಆಡಳಿತ ಮಂಡಳಿ ಸದಸ್ಯರು ಅದ್ದೂರಿಯಾಗಿ ಆಚರಣೆಗೆ ಮುಂದಾಗುವಂತೆ ಮುಖ್ಯಾಧಿಕಾರಿಗೆ ತಿಳಿಸಿದರು.

ಸದಸ್ಯರಾದ ಗುಂಡಪ್ಪ ಗಂಗಾವತಿ ಹಾಗೂ ಅಮೀರ್‌ಬೇಗ್ ಉಸ್ತಾದ್ ಮಾತನಾಡಿ, ಮುದಗಲ್ ಮೊಹರಂ ಭಾವೈಕ್ಯತೆಗೆ ಹೆಸರಾಗಿದ್ದು, ಅನ್ಯ ರಾಜ್ಯ, ಜಿಲ್ಲೆಗಳಿಂದ ಆಗಮಿಸುವ ಭಕ್ತರಿಗೆ ಕುಡಿವ ನೀರು, ಸ್ವಚ್ಛತೆ, ಶೌಚಗೃಹ ಸೇರಿ ಮೂಲಸೌಕರ್ಯ ವ್ಯವಸ್ಥೆ ಹಾಗೂ ವಿದ್ಯುತ್ ದೀಪಾಲಂಕಾರ ಮಾಡಿಸಿ ಎಂದು ಕೋರಿದರು.

ಅಂಗಡಿ ಮುಂಗಟ್ಟುಗಳ ಭೂಬಾಡಿಗೆ ಹೊರೆ ಆಗದಂತೆ ನಿಗದಿ ಮಾಡಿ, ಹರಾಜು ಪ್ರಕ್ರಿಯೆ ಕಾನೂನು ಬಾಹಿರ ಆಗದಂತೆ ನಿಗಾವಹಿಸಿ ಕ್ರಮ ಕೈಗೊಳ್ಳುವಂತೆ ಸದಸ್ಯರಾದ ಶ್ರೀಕಾಂತಗೌಡ, ಎಸ್.ಆರ್.ರಸೂಲ್ ಹೇಳಿದರು.

ಪಟ್ಟಣದಲ್ಲಿ ಕುಡಿವ ನೀರಿನ ಸಮಸ್ಯೆ ದಿನೇದಿನೆ ಹೆಚ್ಚುತ್ತಿದ್ದು, ಅಗತ್ಯ ಕ್ರಮ ಕೈಗೊಳ್ಳುವುದು ಮತ್ತು ನೂತನ ಟ್ಯಾಂಕ್ ನಿರ್ಮಿಸಲು ಅನುದಾನ ಕ್ರೋಢೀಕರಿಸಿದ ಬಗ್ಗೆ ಮುಖ್ಯಾಧಿಕಾರಿ ಪ್ರವೀಣ ಸಭೆಗೆ ಮಾಹಿತಿ ನೀಡಿದರು. ಆಗ ಸದಸ್ಯ ಗುಂಡಪ್ಪ ಮಾತನಾಡಿ, ಶಾಸಕರ ಬಳಿಗೆ ಅಧ್ಯಕ್ಷರ ನೇತೃತ್ವದಲ್ಲಿ ನಿಯೋಗ ತೆರಳಿ ಟ್ಯಾಂಕ್ ನಿರ್ಮಿಸಲು ಕೊರತೆಯಾದ 1 ಕೋಟಿ ರೂ.ಅನುದಾನ ಕೋರಿ ಹೊರಡಲು ಪಕ್ಷಾತೀತವಾಗಿ ಬೆಂಬಲಿಸುವಂತೆ ಮನವಿ ಮಾಡಿದರು. ಹಿರಿಯ ಸದಸ್ಯರು ಬೆಂಬಲಿಸಿದರು.

ಪುರಸಭೆ ವ್ಯಾಪ್ತಿಯ ವಿವಿಧ ವೃತ್ತಗಳಿಗೆ ನಾಮಕರಣ ಮಾಡುವ ಬಗ್ಗೆ ಅರ್ಜಿಗಳು ಸ್ವೀಕೃತಿಯಾಗಿದ್ದು, ಅಂತಿಮವಾಗಿ ಬಸವೇಶ್ವರ ವೃತ್ತ, ನಿರುಪಾದಿ ಶ್ರೀ ವೃತ್ತ, ಹುಸೇನಿ ಆಲಂ ವೃತ್ತಕ್ಕೆ ಅನುಮತಿ ನೀಡಿ ಸ್ಥಳ ಅಂತಿಮಗೊಳಿಸುವಂತೆ ಸೂಚಿಸಲಾಯಿತು.

ಪುರಸಭೆಯ ವಿವಿಧ ಅನುದಾನದಲ್ಲಿ ಜಿಮ್, ಕೆಟಿಟಿಪಿ ಪೋರ್ಟಲ್‌ನಲ್ಲಿ ಕರೆದ ಟೆಂಡರ್ ಪ್ರಕ್ರಿಯೆಗಳಿಗೆ ಆಡಳಿತಾತ್ಮಕ ವಿವರಣೆ ಸಭೆಗೆ ನೀಡಿ ನಂತರ ಏಜೆನ್ಸಿಗಳನ್ನು ಅಂತಿಮಗೊಳಿಸುವಂತೆ ಸದಸ್ಯ ಎಸ್.ಆರ್.ರಸೂಲ್ ಹೇಳಿದರು.

ಪುರಸಭೆಯಲ್ಲಿ ಖಾತಾ ನಕಲು, ಮ್ಯುಟೇಷನ್ ಪಡೆಯಲು ಸಾರ್ವಜನಿಕರು ಪರದಾಡುತ್ತಿರುವ ದೂರಿನನ್ವಯ ಪುರಸಭೆ ಸಿಬ್ಬಂದಿ ತ್ವರಿತಗತಿಯಲ್ಲಿ ಕಾರ್ಯನಿರ್ವಹಿಸಲು ಮುಖ್ಯಾಧಿಕಾರಿಗಳು ಕಾರ್ಯನ್ಮೋಖರಾಗುವಂತೆ ಸದಸ್ಯರು ತಾಕೀತು ಮಾಡಿದರು.

ಉಪಾಧ್ಯಕ್ಷ ಅಜ್ಮೀರ್ ಬೆಳ್ಳಿಕಟ್, ಸ್ಥಾಯಿ ಸಮಿತಿ ಅಧ್ಯಕ್ಷೆ ರಂಜಾನ್‌ಬೀ, ಪುರಸಭೆ ವ್ಯವಸ್ಥಾಪಕ ಸುರೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net