

ಮುದಗಲ್: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಡೆಸುತ್ತಿರುವ ಪೌರಸೇವಾ ನೌಕರರ ಮುಷ್ಕರ ಬುಧವಾರ 2ನೇ ದಿನ ಪೂರೈಸಿ, ಮೂರನೇ ದಿನಕ್ಕೆ ಕಾಲಿಟ್ಟಿದೆ. ಆದರೆ ಪಟ್ಟಣದ ಸ್ವಚ್ಛತೆ ಸೇರಿ ವಿವಿಧ ಕಾರ್ಯಗಳಿಗೆ ತೊಂದರೆಯಾಗುತ್ತಿದೆ.
ರಾಜ್ಯ ಸಂಘಟನೆ ಬೇಡಿಕೆ ಈಡೇರುವವರೆಗೆ ಮುಷ್ಕರ ಮುಂದುವರೆಸಲು ಸೂಚಿಸಿರುವುದರಿಂದ ಮುಷ್ಕರ ಮುಂದುವರೆಸಿದ್ದೇವೆ. ಪೌರಾಡಳಿತ ಸಚಿವರು ಕಲ್ಯಾಣ ಕರ್ನಾಟಕದಲ್ಲಿ ಕಾರ್ಯಕ್ರಮವೊಂದರಲ್ಲಿ ಪುರಸಭೆ ನೌಕರರಿಗೆ ಸರ್ಕಾರ ಬೇಡಿಕೆಗಳ ಈಡೇರಿಕೆಗೆ ಬದ್ಧವಾಗಿದೆ. 4-5ದಿನಗಳಲ್ಲಿ ಪರಿಹರಿಸಲಾಗುವುದು ಎಂದಿದ್ದಾರೆ. ಈವರೆಗೂ ಬೇಡಿಕೆಗಳು ಈಡೇರಿಲ್ಲ. ಧರಣಿಯಿಂದ ಪಟ್ಟಣದಲ್ಲಿ ಈಗಾಗಲೇ ಕಸದ ರಾಶಿ ಬಿದ್ದಿದೆ. ರಾಜ್ಯ ಹೆದ್ದಾರಿಯುದ್ದಕ್ಕೂ ಕಸದ ರಾಶಿ ಕಂಡು ಬರುತ್ತಿದೆ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪೌರಸೇವಾ ನೌಕರರ ಸಂಘದ ಅಧ್ಯಕ್ಷ ಬಸವರಾಜ ಕಟ್ಟಿಮನಿ, ಪೌರಸೇವಾ ನೌಕರರು, ಕಾರ್ಮಿಕರು, ನೀರು ಸರಬರಾಜು ಸಿಬ್ಬಂದಿ ಇದ್ದರು.