

ಮುದಗಲ್ ಐತಿಹಾಸಿಕ ಕೋಟೆ ವೀಕ್ಷಣೆ
ಮುದಗಲ್: ಕನ್ನಡದ ಮನಸುಗಳನ್ನು ಒಂದುಗೂಡಿಸಲು ಕನ್ನಡ ಸಾಹಿತ್ಯ ಪರಿಷತ್ತು ಶ್ರಮಿಸುತ್ತಿದ್ದು, ಕಸಾಪದಿಂದ ಒಂದು ಕೋಟಿ ಸದಸ್ಯತ್ವ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಹೇಳಿದರು.
ಪಟ್ಟಣದಲ್ಲಿ ಕಸಾಪದಿಂದ ಭಾನುವಾರ ಏರ್ಪಡಿಸಿದ್ದ ಡಾ.ರಾಜಕುಮಾರ್ ಜನ್ಮದಿನಾಚರಣೆ ಹಾಗೂ ಕನ್ನಡ ಅಭಿಯಾನದಲ್ಲಿ ಮಾತನಾಡಿದರು. ಕನ್ನಡ ಬೆಳೆಸುವುದಕ್ಕಿಂತ ಉಳಿಸಿಕೊಳ್ಳಲು ಯೋಚನೆ ಮಾಡುವಂಥ ಸ್ಥಿತಿ ನಿರ್ಮಾಣವಾಗಿದೆ. ಕನ್ನಡ ಶಾಲೆಗಳಲ್ಲಿ ಸರ್ಕಾರ ಪಬ್ಲಿಕ್ ಶಾಲೆ ಹೆಸರಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಪಾಠಕ್ಕೆ ಮುಂದಾಗಿದೆ. ಆದರೆ, ಸೂಕ್ತ ಸೌಕರ್ಯ ಮತ್ತು ಅರ್ಹ ಶಿಕ್ಷಕರಿಲ್ಲದೆ ಮಕ್ಕಳು ಅರ್ಧ ಕನ್ನಡ, ಇನ್ನರ್ಧ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯುವಂತಾಗಿದೆ. ಸರ್ಕಾರಿ ನೌಕರರು ಮಕ್ಕಳನ್ನು ಕಡ್ಡಾಯವಾಗಿ ಕನ್ನಡ ಶಾಲೆಯಲ್ಲಿ ಕಲಿಸುವಂತಹ ನಿಯಮ ಜಾರಿ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯ ಮಾಡಲಾಗುವುದು ಎಂದು ಹೇಳಿದರು.
ಪಟ್ಟಣದಲ್ಲಿನ ಕೋಟೆಯನ್ನು ವೀಕ್ಷಣೆ ಮಾಡಿದ ಮಹೇಶ ಜೋಶಿ, ಕೋಟೆ ಸಂರಕ್ಷಣೆ ಹಾಗೂ ಉತ್ಸವಕ್ಕಾಗಿ ಅಭಿಯಾನ ಮಾಡಲಾಗುವುದು. ಕೋಟೆ ಉತ್ಸವಕ್ಕೆ ಕಸಾಪದಿಂದ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಕಸಾಪ ಲಿಂಗಸುಗೂರು ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಗೌಡೂರು, ಜಿಲ್ಲಾ ಅಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ, ಪ್ರಮುಖರಾದ ಡಾ.ಗುರುರಾಜ ದೇಶಪಾಂಡೆ, ಯಮನೂರು ನದಾಫ್, ಬಸವರಾಜ ನಾಯಕ ಖೈರವಾಡಗಿ, ಸಂಜೀವ್, ರಹಿಮಾನ ನದಾಫ್, ರಾಘು ಕುದುರಿ ಇದ್ದರು.