

ಮುದಗಲ್: ಜಾನಪದ ಕಲೆಗೆ ಪುರಾತನ ಕಾಲದಿಂದಲೂ ವಿಶೇಷ ಸ್ಥಾನಮಾನ ಹಾಗೂ ಅದರದೇ ಆದ ವೈಶಿಷ್ಟ್ಯವನ್ನು ಹೊಂದಿದೆ. ಆದರೆ, ಆಧುನಿಕ ಯುಗದ ಭರಾಟೆಯಲ್ಲಿ ಜಾನಪದ ಕಲೆ ಮತ್ತು ಸಂಸ್ಕೃತಿ ಮಾಯವಾಗುತ್ತಿದೆ ಎಂದು ಸಜ್ಜಲಗುಡ್ದ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಬಸ್ಸಪ್ಪ ಹಂದ್ರಾಳ ಕಳವಳ ವ್ಯಕ್ತಪಡಿಸಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಜಾನಪದ ಉತ್ಸವ ಉದ್ಘಾಟಿಸಿ ಮಾತನಾಡಿದರು. ಈಗಿನ ಯುವ ಪೀಳಿಗೆಗೆ ಜಾನಪದ ಕಲೆ, ಸಂಸ್ಕೃತಿಯ ಅರಿವು ಮೂಡಿಸಬೇಕಾದ ಅಗತ್ಯವಿದೆ. ಈ ಮೂಲಕ ಅವರನ್ನು ಗ್ರಾಮೀಣ ಭಾಗದ ಕಲೆಗಳತ್ತ ಸೆಳೆಯುವ ಕೆಲಸಗಳಾಗಬೇಕು ಎಂದರು. ಇದಕ್ಕೂ ಮುನ್ನ ಕಾಲೇಜು ವಿದ್ಯಾರ್ಥಿಗಳು ವಾದ್ಯಗಳನ್ನು ನುಡಿಸುತ್ತ ಹಾಗೂ ವಿದ್ಯಾರ್ಥಿನಿಯರು ಕುಂಭ ಹೊತ್ತು ಸಿಬ್ಬಂದಿಯನ್ನು ಸ್ವಾಗತಿಸಿ ಸಿರಿ ಧಾನ್ಯಗಳಿಗೆ ಪೂಜೆ ಸಲ್ಲಿಸಿದರು.
ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಡಾ. ರವಿಚಂದ್ರ, ಅತಿಥಿ ಉಪನ್ಯಾಸಕರಾದ ನಾಗವರ್ಧನ ರೆಡ್ಡಿ, ಭವ್ಯ, ಎಜಾಜ್, ಶೋಭಾ ಬಿ, ಸತೀಶ್ ಕುಮಾರ್ ಹಳ್ಳಿ, ನಾಗಮ್ಮ, ರತ್ನಮ್ಮ ಸರಸ್ವತಿ, ನರಸಪ್ಪ, ಸೋಮಪ್ಪ, ಸಿದ್ದಮ್ಮ ಪಾಟೀಲ್ ಇತರರಿದ್ದರು.