

ಮುದಗಲ್: ಉಪ ಚುನಾವಣೆಯಲ್ಲಿ ಮೂರಕ್ಕೆ ಮೂರೂ ಸ್ಥಾನಗಳನ್ನು ಕಳೆದುಕೊಳ್ಳಲಿರುವ ಕಾಂಗ್ರೆಸ್, ನಂತರ ನೆಲಸಮ ಆಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಪಟ್ಟಣದಲ್ಲಿ ಭಾನುವಾರ ವೀರಶೈವ ಲಿಂಗಾಯತ ಸಮಾವೇಶದಲ್ಲಿ ಮಾತನಾಡಿದರು. ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಬಿಜೆಪಿ ಸರ್ಕಾರ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ. ಈ ಕಾರಣದಿಂದಲೇ ಒಂದು ಲೋಕಸಭೆ, ಎರಡು ವಿಧಾನಸಭೆ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಮತದಾರರು ಗೆಲ್ಲಿಸಲಿದ್ದಾರೆ. ಹತ್ತು ಸಾವಿರದಷ್ಟು ಬೇರೆಬೇರೆ ಸಮುದಾಯದ ಜನರನ್ನು ಒಗ್ಗೂಡಿಸಿ ಸಭೆ ಮಾಡುವುದು ಮತ್ತು ಸಾವಿರ ಸಂಖ್ಯೆಯ ವೀರಶೈವ ಲಿಂಗಾಯತರನ್ನು ಸೇರಿಸಿ ಸಭೆ ಮಾಡುವುದು ಒಂದೇ. ಮತ್ತೊಬ್ಬರ ಸಮುದಾಯದವರ ಮನವೊಲಿಸಿ ನಮ್ಮತ್ತ ಮತ ಹಾಕಿಸುವಲ್ಲಿ ವೀರಶೈವ ಲಿಂಗಾಯತರು ಮುಂದು ಎಂಬುದು ಇದಕ್ಕೆ ಕಾರಣ ಎಂದರು.
ವೀರಶೈವ ಲಿಂಗಾಯತ, ವಾಲ್ಮಿಕಿ, ದಲಿತ ಹಾಗೂ ಕುರುಬ ಸಮುದಾಯಗಳ ಅನೇಕ ಮುಖಂಡರು ಇದ್ದರು.
ಸರ್ಕಾರ ರಚನೆಯಲ್ಲಿ ಪ್ರತಾಪಗೌಡರ ತ್ಯಾಗ ಇದೆ. ಅವರ ಋಣ ತೀರಿಸಬೇಕಾದರೆ ಮತ್ತೊಮ್ಮೆ ಅವರನ್ನು ಗೆಲ್ಲಿಸಬೇಕಾಗಿದೆ. ಪ್ರತಿ ಸಮುದಾಯಗಳ ಅಭಿವೃದ್ಧಿಗೆ ಸರ್ಕಾರ ಕ್ರಮ ಕೈಗೊಂಡಿದೆ. ವೀರಶೈವ ಲಿಂಗಾಯತರ ಮಠಗಳು, ಶೈಕ್ಷಣಿಕೆ ಕೇಂದ್ರಗಳಿಗೆ ಸರ್ಕಾರ ಅನುದಾನ ನೀಡಿದೆ ಎಂದರು.