

ಮುದಗಲ್: ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗಾಗಿ ರಸ್ತೆ ಪಕ್ಕದಲ್ಲಿದ್ದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕಟ್ಟಡ ತೆರವುಗೊಳಿಸಲು ಟೆಂಡರ್ ಪಡೆದ ಕಂಪನಿ ಮುಂದಾಗಿದ್ದು, 42 ವಿದ್ಯಾರ್ಥಿಗಳ ಶಿಕ್ಷಣ ಡೋಲಾಯಮಾನವಾಗಿದೆ.
ಹೌದು, ಆಮದಿಹಾಳ ಗ್ರಾಪಂ ವ್ಯಾಪ್ತಿ ಬೆಳ್ಳಿಹಾಳ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕಳೆದ 25 ವರ್ಷಗಳ ಹಿಂದೆ ಆರಂಭವಾಗಿದೆ. ಈಗ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಹೆಸರಲ್ಲಿ ಶಾಲೆಯನ್ನು ತೆರವುಗೊಳಿಸುತ್ತಿರುವುದು ಪಾಲಕರು-ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಮಕ್ಕಳ ಶಿಕ್ಷಣಕ್ಕೆ ಕತ್ತರಿ: ಬೆಳ್ಳಿಹಾಳ ಶಾಲೆಯಲ್ಲಿ ಪ್ರಸಕ್ತ ವರ್ಷ 42ಕ್ಕೂ ಹೆಚ್ಚು ವಿದ್ಯಾರ್ಥಿಗಳು ದಾಖಲಾಗಿದ್ದು, ಮುಖ್ಯಶಿಕ್ಷಕಿ ಮತ್ತು ಅತಿಥಿ ಶಿಕ್ಷಕಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇವರಿಬ್ಬರೇ ಎಲ್ಲ ವಿದ್ಯಾರ್ಥಿಗಳಿಗೆ ಬೋಧಿಸುತ್ತ ನಿರ್ವಹಣೆ ಮಾಡುತ್ತಿರುವಾಗಲೇ ಹೆದ್ದಾರಿ ಅಭಿವೃದ್ಧಿಗೆ ಟೆಂಡರ್ ಪಡೆದ ಜಿಎಲ್‌ಆರ್ ಕಂಪನಿ ಸಿಬ್ಬಂದಿ ದಿಢೀರನೆ ಪೊಲೀಸ್ ಭದ್ರತೆಯೊಂದಿಗೆ ಬಂದು ಶಾಲೆಯನ್ನು ಸ್ಥಳಾಂತರಿಸುವಂತೆ ಪೀಡಿಸುತ್ತಿದ್ದಾರೆ.
ಈಗಾಗಲೇ ಶಾಲೆ ಕಾಂಪೌಂಡ್ ಕೆಡವಿದ್ದಾರೆ. ಇದರಿಂದ ಮಕ್ಕಳ ಕಲಿಕೆಗೆ ತೊಂದರೆ ಜತೆಗೆ ಪಾಲಕರಲ್ಲಿ ಆತಂಕ ಮನೆ ಮಾಡಿದೆ.
ಅಧಿಕಾರಿಗಳ ಸೂಚನೆಗೂ ಕಿಮ್ಮತ್ತಿಲ್ಲ: ಇತ್ತೀಚೆಗೆ ಲಿಂಗಸಗೂರು ಸಹಾಯಕ ಆಯುಕ್ತ ಬಸವಣ್ಣೆಪ್ಪ ಕಲಶೆಟ್ಟಿ ಹಾಗೂ ತಹಸೀಲ್ದಾರ್ ಸತ್ಯಮ್ಮ, ಬಿಇಒ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ್ದು, ಜಿಎಲ್‌ಆರ್ ಕಂಪನಿ ವ್ಯವಸ್ಥಾಪಕರೊಂದಿಗೆ ಸಮಾಲೋಚಿಸಿ ಶಾಲೆಗಾಗಿ ಸರ್ಕಾರಿ ಜಾಗವನ್ನು ನಿಗದಿಗೊಳಿಸಿದ್ದು, ಮೂಲಸೌಕರ್ಯ ಒದಗಿಸಿ, ತಾತ್ಕಾಲಿಕ ಶೆಡ್ ನಿರ್ಮಿಸುವಂತೆ ಸೂಚಿಸಿದರೂ ಕಂಪನಿ ಯಾವುದೇ ಕ್ರಮವಹಿಸಿಲ್ಲ.
ರಸ್ತೆ ಕಾಮಗಾರಿ ಹೆಸರಲ್ಲಿ ಮಕ್ಕಳ ಭವಿಷ್ಯದ ಜತೆ ಚೆಲ್ಲಾಟವಾಡುತ್ತಿದ್ದಾರೆಂದು ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೌನಕ್ಕೆ ಶರಣಾದ ಅಧಿಕಾರಿಗಳು: ಜಿಎಲ್‌ಆರ್ ಕಂಪನಿಯವರು ಶಾಲೆ ಸ್ಥಳಾಂತರಕ್ಕೆ ನೀಡಿದ್ದ ಗಡುವು ಪೂರ್ಣಗೊಂಡಿದ್ದು, ಕೆಲವೇ ದಿನಗಳಲ್ಲಿ ಶಾಲೆ ತೆರವು ಮಾಡಲಾಗುವುದು ಎಂದು ಮುಖ್ಯಶಿಕ್ಷಕಿ ಶಿವು ಬಾಯಿ ಅವರಿಗೆ ತಿಳಿಸಿದ್ದಾರೆ.
ಆದರೆ, ಅಧಿಕಾರಿಗಳು ಸೂಚಿಸದ ಹೊರತು ಕಂಪನಿಯವರ ಮಾತು ಕೇಳಿದರೆ ಮಕ್ಕಳ ಕಲಿಕೆಗೆ ತೊಂದರೆಯಾಗಲಿದೆ. ಹಾಗಾಗಿ ತಾತ್ಕಾಲಿಕ ಶೆಡ್ ನಿರ್ಮಿಸುವವರೆಗೆ ಶಾಲೆ ತೆರವಿಗೆ ಅವಕಾಶ ನೀಡುವುದಿಲ್ಲ ಎಂದು ಗ್ರಾಮಸ್ಥರಾದ ಹುಸೇನಪ್ಪ ಹರಿಜನ, ಇಮಾಮ್ ಹುಸೇನ್, ವೀರಭದ್ರಪ್ಪ, ಅಮರೇಗೌಡ ಸೇರಿ ಸ್ಥಳೀಯರು ಪಟ್ಟು ಹಿಡಿದಿದ್ದಾರೆ.
ಅಲ್ಲದೆ, ಮಕ್ಕಳ ಕಲಿಕೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಸೂಕ್ತ ಕ್ರಮವಹಿಸಬೇಕಿದ್ದ ಅಧಿಕಾರಿಗಳು ಇಲ್ಲಿವರೆಗೂ ಸುಮ್ಮನಿದ್ದು, ಮುಂದೇನು ಮಾಡಲಿದ್ದಾರೆ ಎಂದು ಕಾದು ನೋಡಬೇಕಿದೆ.
===========
ತಾತ್ಕಾಲಿಕ ಶೆಡ್ ನಿರ್ಮಿಸಿ ಮೂಲಸೌಕರ್ಯ ಒದಗಿಸಿದ ನಂತರವೇ ಶಾಲೆ ತೆರವು ಮಾಡಲು ಅವಕಾಶ ನೀಡುತ್ತೇವೆ. ಸಂಬಂಧಿಸಿದ ಅಧಿಕಾರಿಗಳಿಗೆ ಗಮನಕ್ಕೆ ತರಲಾಗಿದ್ದು, ರಸ್ತೆ ನಿರ್ಮಾಣದ ಕಂಪನಿಯವರೊಂದಿಗೆ ಅಧಿಕಾರಿಗಳು ಸಮಾಲೋಚಿಸಿ ಮಕ್ಕಳ ಶಿಕ್ಷಣಕ್ಕೆ ಸಮಸ್ಯೆ ಆಗದಂತೆ ಕ್ರಮಕೈಗೊಳ್ಳಬೇಕು.
> ಶಿವನಗೌಡ ಬೆಳ್ಳಿಹಾಳ, ಎಸ್ಡಿಎಂಸಿ ಅಧ್ಯಕ್ಷ, ಸ.ಕಿ.ಪ್ರಾ.ಶಾಲೆ ಬೆಳ್ಳಿಹಾಳ
===========
ಮಕ್ಕಳ ಕಲಿಕೆಗೆ ಯಾವುದೇ ರೀತಿಯ ತೊಂದರೆಯಾಗದಂತೆ ನಿಗಾವಹಿಸಬೇಕು. ಶೆಡ್ ನಿರ್ಮಿಸಿದ ನಂತರವೇ ಶಾಲೆ ತೆರವು ಕಾರ್ಯ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು.
> ಮಾನಪ್ಪ ಡಿ.ವಜ್ಜಲ್, ಶಾಸಕ, ಲಿಂಗಸುಗೂರು
===========
ಈಗಾಗಲೇ ಜಿಎಲ್‌ಆರ್ ಕಂಪನಿ ವ್ಯವಸ್ಥಾಪಕರಿಗೆ ಮಕ್ಕಳ ಕಲಿಕೆಗೆ ತಾತ್ಕಾಲಿಕ ಶೆಡ್ ನಿರ್ಮಿಸುವಂತೆ ಸೂಚಿಸಲಾಗಿದೆ. ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
> ಸುಜಾತಾ ಹುನೂರು, ಕ್ಷೇತ್ರ ಶಿಕ್ಷಣಾಧಿಕಾರಿ, ಲಿಂಗಸುಗೂರು