

ಮುದೇನೂರು: ಮೆಣೇದಾಳ ಗ್ರಾಪಂ ವ್ಯಾಪ್ತಿಯ ಬಚಿನಾಳದಲ್ಲಿ ವಾಂತಿ-ಭೇದಿ ಪ್ರಕರಣ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ, ತಾಪಂ ಮತ್ತು ಗ್ರಾಪಂ ಮಟ್ಟದ ಅಧಿಕಾರಿಗಳು ಬುಧವಾರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ತಾಲೂಕು ವೈದ್ಯಾಧಿಕಾರಿ ಆನಂದ ಗೋಟೂರು ಮಾತನಾಡಿ, ಗ್ರಾಮದಲ್ಲಿ ಏಕಾಏಕಿ ವಾಂತಿ-ಭೇದಿ ಪ್ರಕರಣ ಕಂಡು ಬಂದಿದ್ದು, ಸಾರ್ವಜನಿಕರು ಎರಡು ವಾರಗಳ ಕಾಲ ಕಡ್ಡಾಯವಾಗಿ ಬಿಸಿ ನೀರು ಸೇವೆನೆ ಮಾಡಬೇಕು. ಆರೋಗ್ಯ ಇಲಾಖೆ ಸಿಬ್ಬಂದಿ ನಿಯೋಜಿಸಿದ್ದು, ಪ್ರತಿಯೊಬ್ಬರೂ ಚಿಕಿತ್ಸೆ ಪಡೆದುಕೊಳ್ಳಬೇಕು. ಸರಿಯಾಗಿ ಆಹಾರ ಸೇವನೆ ಮಾಡಬೇಕು. ಕುಡಿವ ನೀರಿನಲ್ಲಿ ತೊಂದರೆ ಕಾಣಿಸಿಕೊಂಡಿದ್ದು, ಸರಿಪಡಿಸಲು ಗ್ರಾಮಾಡಳಿತಕ್ಕೆ ಸೂಚಿಸಲಾಗಿದೆ ಎಂದರು.
ಮೆಣೇದಾಳ ಗ್ರಾಪಂ ಪಿಡಿಒ ಹನಮಂತರಾಯ ಅಮರಾಪುರ ಮಾತನಾಡಿ, ಗ್ರಾಮಕ್ಕೆ ಪಂಚಾಯಿತಿಯಿಂದ ಶುದ್ಧ ಕುಡಿವ ನೀರಿನ ವ್ಯವಸ್ಥೆ ಕಲ್ಪಿಸುವ ಜತೆಗೆ ಫಾಗಿಂಗ್ ಸಿಂಪಡಣೆಗೂ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಹಿರೇ ಮನ್ನಾಪೂರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ವಿನಯ ಕುಮಾರ, ತಾಪಂ ಐಇಸಿ ಸಂಯೋಜಕ ದೇವರಾಜ ಪತ್ತಾರ, ಕಾಯಕ ಮಿತ್ರ ಮಿನಾಕ್ಷಿ, ಗ್ರಾಪಂ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಇದ್ದರು.
ಈ ಕುರಿತು ವಿಜಯವಾಣಿ ನ.30ರಂದು ‘ವೈದ್ಯಾಧಿಕಾರಿಗಳ ವಿರುದ್ಧ ಬಚಿನಾಳ ಗ್ರಾಮಸ್ಥರ ಆಕ್ರೋಶ’ ಶೀರ್ಷಿಕೆಯಡಿ ವರದಿ ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.