ಗಡಿಗ್ರಾಮ ಲಿಂಗದಹಳ್ಳಿ ಹಳ್ಳಕ್ಕೆ ಇಲ್ಲ ಸೇತುವೆ ಭಾಗ್ಯ: ಮಳೆ ಬಂದರೆ ಸಂಪರ್ಕ ಕಡಿತ; ರೈತರು, ವಿದ್ಯಾರ್ಥಿಗಳಿಗೆ ಸಮಸ್ಯೆ

25102022 mudenur halla bridze
Published on

ಮುದೇನೂರು: ಕುಷ್ಟಗಿ ತಾಲೂಕಿನ ಗಡಿಭಾಗ ಲಿಂಗದಹಳ್ಳಿಯ ಹಳ್ಳಕ್ಕೆ ಸೇತುವೆ ನಿರ್ಮಿಸದ ಕಾರಣ ಮಳೆ ಬಂದರೆ ತುಂಬಿ ಹರಿಯುವುದು ಸಾಮಾನ್ಯವಾಗಿದೆ. ಇದರಿಂದ ಗ್ರಾಮಸ್ಥರು, ವಾಹನ ಸವಾರರು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ತಾಲೂಕು ಕೇಂದ್ರದಿಂದ ಅಂದಾಜು 35 ಕಿಮೀ ದೂರದಲ್ಲಿರುವ ಲಿಂಗದಹಳ್ಳಿ ಗ್ರಾಪಂ ಕೇಂದ್ರ ಸ್ಥಾನವಾಗಿದೆ. ಗ್ರಾಮದಿಂದ ಹೊಮ್ಮಿನಾಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಹಳ್ಳ ಹರಿಯುತ್ತದೆ. ಇತ್ತೀಚೆಗೆ ಭಾರಿ ಮಳೆ ಸುರಿದ ಪರಿಣಾಮ ಹಳ್ಳದಲ್ಲಿ ನಿರಂತರವಾಗಿ ನೀರು ಹರಿಯುತ್ತಿದ್ದು, ವಾಹನ ಸವಾರರು, ಪ್ರಯಾಣಿಕರು, ರೈತರು, ಜಾನುವಾರಗಳು, ಶಾಲಾ ವಿದ್ಯಾರ್ಥಿಗಳು, ವೃದ್ಧರಿಗೆ ತೊಂದರೆಯಾಗಿದೆ. ಮಳೆಗೆ ಕೆರೆ ತುಂಬಿ ನೀರು ಹಳ್ಳಕ್ಕೆ ಬಂದು ರಸ್ತೆ ಉದ್ದಕ್ಕೂ ಹಗಲು ರಾತ್ರಿ ಹರಿಯುತ್ತಿದ್ದು, ತಗ್ಗು-ದಿನ್ನೆಗಳು ನಿರ್ಮಾಣವಾಗಿವೆ. ವಾಹನ ಸವಾರರು ಭಯದಲ್ಲೇ ಸಂಚಾರ ಮಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಗ್ರಾಪಂ ಕೇಂದ್ರವಾಗಿರುವ ಲಿಂಗದಹಳ್ಳಿಯಲ್ಲಿ ಉಪ ಆರೋಗ್ಯ ಕೇಂದ್ರ, ನ್ಯಾಯ ಬೆಲೆ ಅಂಗಡಿ, ಅಂಚೆ ಕಚೇರಿ, ಸರ್ಕಾರಿ ಹಿಪ್ರಾ, ಪ್ರೌಢಶಾಲೆಗಳಿವೆ. ಪಂಚಾಯುತಿ ವ್ಯಾಪ್ತಿಯ ವಿರುಪಾಪುರ, ಹೊಮ್ಮಿನಾಳ, ಹೊನಗಡ್ಡಿ, ಜಿ.ಎಚ್.ಕ್ಯಾಂಪ್, ಗುಡ್ಡದ ಹನುಮಸಾಗರ ಗ್ರಾಮಗಳಿಂದ ನಿತ್ಯ ನೂರಾರು ಜನ ಆಗಮಿಸುತ್ತಾರೆ. ಆದರೆ, ಹಳ್ಳ ತುಂಬಿ ಹರಿದರೆ ಸಂಪರ್ಕ ಕಡಿತಗೊಳ್ಳುತ್ತಿದ್ದು, ಪರದಾಡುವಂತಾಗಿದೆ. ಪ್ರತಿ ವರ್ಷ ಮಳೆಗಾಲದಲ್ಲಿ ಹಳ್ಳ ಹರಿಯುವುದು ಸಾಮಾನ್ಯವಾಗಿದ್ದು, ಸೇತುವೆ ನಿರ್ಮಿಸುವಂತೆ ಹಲವು ಸಲ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಈ ಕುರಿತು ಜನಪ್ರತಿನಿಧಿಗಳು ಗಮನಹರಿಸಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.

ಲಿಂಗದಹಳ್ಳಿ ಹಳ್ಳಕ್ಕೆ ಸೇತುವೆ ನಿರ್ಮಿಸದ ಪರಿಣಾಮ ಗ್ರಾಮಸ್ಥರು ಹಾಗೂ ಸುತ್ತಲಿನ ಹಳ್ಳಿ ಜನರಿಗೆ ತೊಂದರೆಯಾಗಿದೆ. ಗ್ರಾಪಂ ಕೇಂದ್ರಕ್ಕೆ ವಿವಿಧ ಕೆಲಸಗಳಿಗಾಗಿ ಬರುವವರಿಗೆ ಸಮಸ್ಯೆಯಾಗಿದೆ. ಪಿಡಬ್ಲುೃಡಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಉಪಯೋಗವಾಗಿಲ್ಲ. ಕ್ಷೇತ್ರದ ಚುನಾಯಿತ ಪ್ರತಿನಿಧಿಗಳು ಕ್ರಮಕ್ಕೆ ಮುಂದಾಗಬೇಕು.| ಅಮರೇಶ ಕಡಗದ್ ಹೋರಟಗಾರ, ಲಿಂಗದಹಳ್ಳಿ

ಈ ಬಾರಿ ಮಳೆ ಹೆಚ್ಚಾಗಿದ್ದರಿಂದ ಲಿಂಗದಹಳ್ಳಿ ಗ್ರಾಮದ ಹಳ್ಳದಲ್ಲಿ ನಿರಂತರ ನೀರು ಹರಿಯುತ್ತಿದ್ದು, ಜನರಿಗೆ ಸಮಸ್ಯೆಯಾಗಿದೆ. ಗ್ರಾಮದ ಹಿಂಭಾಗದಲ್ಲಿ ನಿರ್ಮಿಸಿರುವ ಕೆರೆ ನೀರು ಹಳ್ಳಕ್ಕೆ ಬರುತ್ತಿದೆ. ಸೇತುವೆ ನಿರ್ಮಾಣ ಮಾಡುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ. ಈಗಾಗಲೇ ಅಂದಾಜು 40 ಲಕ್ಷ ರೂ. ಬಿಡುಗಡೆ ಮಾಡಿದ್ದು, ಟೆಂಡರ್ ಪ್ರಕ್ರಿಯೆಯಲ್ಲಿದೆ. ತ್ವರಿತವಾಗಿ ಸೇತುವೆ ನಿರ್ಮಾಣ ಮಾಡಲಾಗುವುದು.| ಅಮರೇಗೌಡ ಪಾಟೀಲ್ ಬಯ್ಯಪುರ ಶಾಸಕ, ಕುಷ್ಟಗಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net