

ಮುದೇನೂರು: ಶಿರಗುಂಪಿ ಗ್ರಾಪಂ ವ್ಯಾಪ್ತಿಗೆ ಒಳಪಡುವ ಜಾಲಿಹಾಳ ಗ್ರಾಮ ಈಗ ಮದ್ಯಪಾನ ಮುಕ್ತವಾಗಿದ್ದು, ಮಹಿಳೆಯರು, ಮಕ್ಕಳು, ವೃದ್ಧರು ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ಇದರಿಂದ ಈ ಹಳ್ಳಿ ಈಗ ಕುಷ್ಟಗಿ ತಾಲೂಕಿಗೆ ಆದರ್ಶವಾಗಿ ಹೊರಹೊಮ್ಮಿದೆ.
ದಶಕದ ಹಿಂದೆ ಗ್ರಾಮದಲ್ಲಿ ಪಾನ್‌ಶಾಪ್, ಕಿರಾಣಿ ಅಂಗಡಿ ಸೇರಿದಂತೆ ಇತರೆಡೆ ಅಕ್ರಮವಾಗಿ ಮದ್ಯ ಮಾರಾಟ ನಡೆದಿತ್ತು. ಆ ಸಮಯದಲ್ಲಿ ಕುಷ್ಟಗಿ ಪಿಎಸ್‌ಐ ಆಗಿದ್ದ ವಿಶ್ವನಾಥ ಹಿರೇಗೌಡ್ರ, ಮದ್ಯಮುಕ್ತ ಗ್ರಾಮಕ್ಕೆ ಪಣತೊಡುವಂತೆ ಅರಿವು ಮೂಡಿಸಿದ್ದರು. ಗ್ರಾಮದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡಬೇಕು ಮತ್ತು ದುಶ್ಚಟಗಳಿಂದ ದೂರವಿರಬೇಕು ಎನ್ನುವ ಸಂಕಲ್ಪ ತೊಡುವಂತೆ ತಿಳಿಹೇಳಿದ್ದರು. ಈ ಮಾತುಗಳು ಗ್ರಾಮಸ್ಥರನ್ನು ಪ್ರೇರೇಪಿಸಿದವು. ಹೀಗಾಗಿ ನಾಲ್ಕೈದು ವರ್ಷಗಳಿಂದ ಇಡೀ ಊರು ಸಂಪೂರ್ಣ ಮದ್ಯಪಾನ ಮುಕ್ತವಾಗಿದೆ.
ಗ್ರಾಮವು ತಾಲೂಕು ಕೇಂದ್ರದಿಂದ 25 ಕಿಮೀ ದೂರದಲ್ಲಿದೆ. ಅಂದಾಜು 250ಕ್ಕೂ ಹೆಚ್ಚು ಮನೆಗಳಿವೆ. ಎರಡು ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿದೆ. ಯುವ ಜನಾಂಗ ದುಶ್ಚಟಗಳಿಗೆ ಒಳಗಾಗಬಾರದೆಂಬ ಕಾರಣಕ್ಕೆ ಗ್ರಾಮಸ್ಥರು ಕೈಗೊಂಡ ನಿರ್ಧಾರ ಮಾದರಿಯಾಗಿದೆ. ಹಬ್ಬ-ಜಾತ್ರೆಗಳಲ್ಲಿ ಸೃಷ್ಟಿಯಾಗುತ್ತಿದ್ದ ಕಲಹಗಳು ಈಗ ನಿಂತಿವೆ. ಪ್ರತಿಯೊಬ್ಬರೂ ನೆಮ್ಮದಿ ಜೀವನ ಸಾಗಿಸುತ್ತಿದ್ದಾರೆ. ಸಂಭ್ರಮ-ಸಡಗರದಿಂದ ಹಬ್ಬಗಳನ್ನು ಆಚರಿಸುತ್ತಿದ್ದಾರೆ.