

ಮುದೇನೂರು: ಹೊನಗಡ್ಡಿ ಗ್ರಾಮದಲ್ಲಿ ದಶಕದ ಹಿಂದೆ ನಿರ್ಮಿಸಿರುವ ಜಿನುಗು ಕೆರೆಯ ಅಂಗಳದಲ್ಲಿ ಜಾಲಿಗಿಡಗಳು, ಹೂಳು ತುಂಬಿ ನಿರ್ಲಕ್ಷೃಕ್ಕೆ ಒಳಗಾಗಿದೆ.
ಗ್ರಾಮದ ಹೊರ ಹೊಲಯದಲ್ಲಿ ಕೆರೆ ನಿರ್ಮಿಸಿ 12 ವರ್ಷ ಗತಿಸಿದೆ. ಮಳೆಗಾಲದಲ್ಲಿ ಭರ್ತಿಯಾಗುವ ಮೂಲಕ ಹೊನಗಡ್ಡಿ, ಹೊಮ್ಮಿನಾಳ, ಲಾಯದುಣಿಸಿ ಸೇರಿದಂತೆ ಸುತ್ತಲಿನ ಗ್ರಾಮಗಳ ರೈತರ ಜಮೀನಿನ ಬೋರ್‌ವೆಲ್‌ಗಳಲ್ಲಿ ಅಂತರ್ಜಲ ಹೆಚ್ಚಿಸಿದೆ. ಅಷ್ಟೇ ಅಲ್ಲದೆ ಜಾನುವಾರುಗಳ ಜಲದಾಹ ನೀಗಿಸಿದೆ. ಆದರೆ, ಆಡಳಿತ ವರ್ಗದ ಕಡೆಗಣನೆಯಿಂದ ಕೆರೆಯಲ್ಲೀಗ ಗಿಡಗಂಟಿ ಬೆಳೆದು ನಿಂತಿದೆ. ಅಲ್ಲದೆ ಹೂಳು ತುಂಬಿಕೊಂಡಿದ್ದು, ನೀರಿನ ಪ್ರಮಾಣವೂ ತಗ್ಗಿದೆ.
ರಸ್ತೆ, ನಾಮಫಲಕ ಇಲ್ಲ: ಗ್ರಾಮದಿಂದ ಒಂದು ಕಿಮೀ ದೂರದಲ್ಲಿರುವ ಕೆರೆಗೆ ತೆರಳಲು ಸಮಪರ್ಕವಾದ ರಸ್ತೆ ಇಲ್ಲ. ಇದ್ದ ಮಾರ್ಗವನ್ನೂ ದುರಸ್ತಿಪಡಿಸಲ್ಲ. ಇತ್ತೀಚೆಗೆ ಸುರಿದ ಮಳೆಗೆ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಗುಂಡಿಗಳು ನಿರ್ಮಾಣವಾಗಿವೆ. ಸಾರ್ವಜನಿಕರು, ಜಾನುವಾರುಗಳು, ಎತ್ತಿನ ಬಂಡಿ, ಟ್ರಾೃಕ್ಟರ್ ದ್ವಿಚಕ್ರ ವಾಹನದ ಸವಾರರಿಗೆ ತೊಂದರೆಯಾಗಿದೆ. ಜಿನುಗು ಕೆರೆಗೆ ಈವರೆಗೆ ಸಂಬಂಧಿಸಿದ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿಲ್ಲ. ಕೆರೆಯ ನಾಮಫಲಕ ಅಳವಡಿಸಿಲ್ಲ. ಕಾವಲುಗಾರರನ್ನು ನೇಮಿಸಿಲ್ಲ. ಸಂಬಂಧಿಸಿದವರು ಕೂಡಲೇ ಕೆರೆ ಹೂಳು ತೆರವು ಮಾಡಬೇಕು. ಜಂಗಲ್ ಕಟಿಂಗ್, ರಸ್ತೆ ದುರಸ್ತಿ ಮಾಡಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.
ಹೊನಗಡ್ಡಿ ಗ್ರಾಮದ ಕೆರೆಯಲ್ಲಿ ಜಂಗಲ್ ಕಟಿಂಗ್‌ಗೆ ಈಗಾಗಲೇ ಟೆಂಡರ್ ಕರೆಯಲಾಗಿದೆ. ಕೆರೆ ಹೂಳೆತ್ತುವುದು, ರಸ್ತೆ ನಿರ್ಮಾಣ, ನಾಮಫಲಕ ಅಳವಡಿಸಲು ಕ್ರಮಕೈಗೊಳ್ಳಲಾಗುವುದು. ವಿವಿಧ ಗ್ರಾಮಗಳ ಕೆರೆಗಳಿಗೆ ಕಾವಲುಗಾರರ ನೇಮಕಕ್ಕೆ ಸಂಬಂಧಿಸಿ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು.| ರಾಜಶೇಖರ ಕಟ್ಟಿಮನಿ ಜೆಇ, ಸಣ್ಣ ನೀರಾವರಿ ಇಲಾಖೆ, ಕುಷ್ಟಗಿ
ಹೊನಗಡ್ಡಿ ಕೆರೆ ನಿರ್ಮಾಣವಾಗಿ ದಶಕ ಕಳೆದಿದೆ. ಕೆರೆಗೆ ತೆರಳಲು ಸೂಕ್ತ ರಸ್ತೆ ಇಲ್ಲ, ನಾಮಫಲಕ ಅಳವಡಿಸಿಲ್ಲ. ಈವರೆಗೆ ಜಂಗಲ್ ಕಟಿಂಗ್ ಮಾಡಿಲ್ಲ. ಕೆರೆ ಅಭಿವೃದ್ಧಿಗೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಮುಂದಾಗಬೇಕು.| ಸಂಗಪ್ಪ ತುಪ್ಪದ್ ಗ್ರಾಮಸ್ಥ, ಹೊನಗಡ್ಡಿ