

ಮುದೇನೂರು: ತಾವರಗೇರಾ ಹೋಬಳಿ ವ್ಯಾಪ್ತಿಯಲ್ಲಿ ಶೇಂಗಾ ಬೆಳೆಗೆ ಎಲೆಚುಕ್ಕಿ ರೋಗ ಕಾಣಿಸಿಕೊಂಡಿದ್ದು, ರೈತರ ಜಮೀನುಗಳಿಗೆ ಕೃಷಿ ಇಲಾಖೆ ಅಧಿಕಾರಿಗಳು ಶನಿವಾರ ಭೇಟಿ ನೀಡಿ ಪರಿಶೀಲಿಸಿದರು.
ವಿರುಪಾಪುರ ಗ್ರಾಮದ ರೈತ ಕುಂಟೆಪ್ಪ ಕಂಕಿ ಜಮೀನಿಗೆ ಭೇಟಿ ನೀಡಿದ ಕೃಷಿ ಇಲಾಖೆ ಎಡಿ ವಿ.ತಿಪ್ಪೇಸ್ವಾಮಿ, ಶೇಂಗಾ ಬೆಳೆಗೆ ರೋಗ ಬಾಧೆ ಕಾಣಿಸಿಕೊಂಡಿದ್ದು, ಭಯಪಡುವ ಅಗತ್ಯವಿಲ್ಲ. ಬೆಳೆಗೆ ಎಗ್ನೀಕೋಲೊಜೆಒಲ್ ಮತ್ತು ಕಾರ್ಬನ್ ಡೈಜಿಮ್ ಔಷಧ ಸಿಂಪಡಿಸಿದರೆ ರೋಗ ಹತೋಟಿಗೆ ತರಬಹುದು. ರೈತರು ಹಿಂಗಾರು ಹಂಗಾಮಿನ ಬೆಳೆ ಸಮೀಕ್ಷೆಗೆ ಮುಂದಾಗಬೇಕು. ಸಮೀಕ್ಷೆ ನಡೆಸುವುದರಿಂದ ಋತುಮಾನಕ್ಕೆ ಅನುಗುಣವಾಗಿ ಪಹಣಿಗಳಲ್ಲಿ ಸರಿಯಾದ ಬೆಳೆ ಮಾಹಿತಿ ದೊರೆಯುತ್ತದೆ.
ಸರ್ಕಾರದ ಕನಿಷ್ಠ ಬೆಲೆ ಬೆಂಬಲ, ಸಹಾಯಧನ, ಬೆಳೆ ಪ್ರದೇಶದ ಅಂದಾಜು, ತೋಟಗಾರಿಕೆ ಹಾಗೂ ಕೃಷಿ ಇಲಾಖೆಯ ಯೋಜನೆಯಡಿ ಫಲಾನುಭವಿಗಳು ಆಯ್ಕೆ ಮಾಡಲು ಅನುಕೂಲವಾಗುತ್ತದೆ ಎಂದು ತಿಳಿಸಿದರು. ತಾವರಗೇರಾ ಹೋಬಳಿ ಕೃಷಿ ಅಧಿಕಾರಿ ಬಾಲಪ್ಪ ಜಲಗೇರಾ, ತಾಂತ್ರಿಕ ಅಧಿಕಾರಿಗಳಾದ ವೀರನಗೌಡ ಪಾಟೀಲ್, ಸಂತೋಷ, ರೈತ ಮುಖಂಡರಾದ ಅಮರೇಶ ಡೊಳ್ಳಿನ್, ಪರಶುರಾಮ ಕಂಕಿ, ಭೀಮನಗೌಡ ಪಾಟೀಲ್, ಅಮರೇಶ ಮರಕಟ್, ಸಂಗಪ್ಪ ಬೆಂಕಿ ಇತರರಿದ್ದರು.