ಸಿದ್ದಾಪುರದಲ್ಲಿ ಕೆಸರುಮಯವಾದ ರಸ್ತೆ

Oplus_16908288
Oplus_16908288
Published on

ಸಿದ್ದಾಪುರ: ಸಿದ್ದಾಪುರದಲ್ಲಿ ಸುರಿದ ಮಳೆಯಿಂದ ಕೆಸರುಮಯವಾದ ರಸ್ತೆಯಲ್ಲಿ ಸತತ ನಾಲ್ಕು ಗಂಟೆಗಳ ಕಾಲ ವಾಹನಗಳು ಸಾಲುಗಟ್ಟಿ ನಿಂತು ನಾಲ್ಕು ಬಸ್‌ಗಳು ಸೇರಿದಂತೆ ಕೆಲವು ವಾಹನಗಳು ಕೆಸರಿನಲ್ಲಿ ಸಿಲುಕಿ ಸಂಚರಿಸಲು ಸಾಧ್ಯವಾಗದಂಥ ಪರಿಸ್ಥಿತಿ ಶುಕ್ರವಾರ ನಿರ್ಮಾಣವಾಯಿತು.

ವಿರಾಜಪೇಟೆ ತಾಲೂಕಿನ ಸಿದ್ದಾಪುರದಲ್ಲಿ ಅಂತಾರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಕೊಣನೂರು-ಮಾಕುಟ್ಟ ರಾಜ್ಯ ಹೆದ್ದಾರಿಯ ಸಂಪರ್ಕದ ಸಿದ್ದಾಪುರ ಮುಖ್ಯ ರಸ್ತೆಯ 1 ಕಿಲೋಮೀಟರ್ ರಸ್ತೆ ವಿಸ್ತರಣೆ ಅಭಿವೃದ್ಧಿ ಕಾಮಗಾರಿ 11 ತಿಂಗಳು ಕಳೆದರೂ ಕಾಮಗಾರಿ ಪೂರ್ಣವಾಗದೆ ಸಂಕಷ್ಟದಲ್ಲಿ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಗುತ್ತಿಗೆದಾರರ ನಿರ್ಲಕ್ಷೃದಿಂದ ಕಾಮಗಾರಿ ವಿಳಂಬವಾಗುತ್ತಿರುವ ಪರಿಣಾಮವೇ ವಾಹನ ಸವಾರರು ನಿತ್ಯ ಸಮಸ್ಯೆ ಎದುರಿಸುವಂಥ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಕಳೆದೆರಡು ದಿನಗಳಿಂದ ರಸ್ತೆ ಅಭಿವೃದ್ಧಿ ಕಾಮಗಾರಿ ಪ್ರಾರಂಭಿಸಲಾಗಿತ್ತು. ರಾತ್ರಿ ಸುರಿದ ಮಳೆಯಿಂದ ರಸ್ತೆಯುದ್ದಕ್ಕೂ ಸಂಪೂರ್ಣ ಕೆಸರುಮಯವಾಗಿತ್ತು. ಸಿದ್ದಾಪುರ ಮಾರ್ಗವಾಗಿ ಸಂಚರಿಸುವ ವಾಹನಗಳು ಸಾಲುಗಟ್ಟಿ ನಿಂತು ಇಡೀ ಗ್ರಾಮದ ಎಲ್ಲ ರಸ್ತೆಗಳು ಟ್ರಾಫಿಕ್ ಜಾಮ್ ಆಗಿತ್ತು. ಈ ನಡುವೆ ಕೆಸರಿನಲ್ಲಿ ಸಿಲುಕಿದ ನಾಲ್ಕು ಬಸ್‌ಗಳು ಸಂಚರಿಸಲು ಸಾಧ್ಯವಾಗದೆ ಸಿಲುಕಿಕೊಂಡಿತ್ತು. ನಂತರ ಜೆಸಿಬಿ, ಕರ‌್ರನ್ ವಾಹನ ತಂದು ಬಸ್‌ಗಳಿಗೆ ಹಗ್ಗ ಕಟ್ಟಿ ಎಳೆದು ಸಂಚರಿಸಲು ಅನುವು ಮಾಡಿಕೊಡಲಾಯಿತು.

ಸಿದ್ದಾಪುರ ಪೊಲೀಸರು ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಲು ಹರಸಾಹಸಪಟ್ಟರು. ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿಗಳು ಕೆಸರಿನ ರಸ್ತೆಯಲ್ಲಿ ಸಿಲುಕಿ ಧರಿಸಿದ ಪರಿಣಾಮ ಬಟ್ಟೆ ಹಾಗೂ ಶೂಗಳಿಗೆ ಕೆಸರು ಮೆತ್ತಿತ್ತು.

ಈ ನಡುವೆ ಪಾಲಕರು ಮಕ್ಕಳನ್ನು ಬೈಕ್‌ನಲ್ಲಿ ಕರತರುವ ವೇಳೆ ಜಾರಿ ಬಿದ್ದು ಗಾಯಗೊಂಡ ಘಟನೆಯೂ ನಡೆಯಿತು. ಮಹಿಳೆಯೊಬ್ಬರು ಬಿದ್ದು ಗಾಯವಾಗಿ ಸಿದ್ದಾಪುರ ಆಸ್ಪತ್ರೆಗೆ ದಾಖಲಿಸಲಾಯಿತು.

ಶಾಲಾ ವಾಹನದಲ್ಲಿ ತೆರಳುತ್ತಿದ್ದ ವಿದ್ಯಾರ್ಥಿಗಳು ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿದ ಪರಿಣಾಮ ರಸ್ತೆಯಲ್ಲಿ ನಡೆದು ಶಾಲೆಗೆ ತೆರಳಿದರು. ಕೂಲಿ ಕೆಲಸಕ್ಕೆ ತೆರಳುವ ಕಾರ್ಮಿಕರು ವಾಹನಗಳಲ್ಲಿ ಕೆಲಸಕ್ಕೆ ತೆರಳಲು ಸಾಧ್ಯವಾಗದೆ ಮನೆಗೆ ಹಿಂತಿರುಗಿದರು.

ಟ್ರಾಫಿಕ್ ಜಾಮಿನಲ್ಲಿ ಸಿಲುಕಿದ್ದ ಆಂಬುಲೆನ್ಸ್ ವಾಹನ ಪ್ರಯಾಸದಾಯಕವಾಗಿಯೇ ಸಂಚರಿಸಿತು. ಕಾಮಗಾರಿ ವಿಳಂಬದ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ, ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರ ಗಮನಕ್ಕೂ ತಂದರು.

ಸಿದ್ದಾಪುರಕ್ಕೆ ಬಂದ ಶಾಸಕ ಎ.ಎಸ್.ಪೊನ್ನಣ್ಣ ಅವರು ಗುತ್ತಿಗೆದಾರನನ್ನು ತರಾಟೆಗೆ ತೆಗೆದುಕೊಂಡು ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಖಡಕ್ ಸೂಚನೆ ನೀಡಿದರು.

ವಾಹನ ಸಂಚಾರ ಸುಗಮವಾದ ನಂತರ ಕೆಸರು ರಸ್ತೆಗೆ ವೈಟ್‌ಮಿಕ್ಸ್ ಜಲ್ಲಿಯನ್ನು ಹಾಕಿ ಸಮತಟ್ಟು ಮಾಡಿದರು. ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕೆಂದು ಸ್ಥಳೀಯರು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net