

ಕಿಕ್ಕೇರಿ: ಮೂಲಸೌಲಭ್ಯಗಳಿಂದ ನಲುಗುತ್ತಿರುವ ಗ್ರಾಮವಾದ ಸಮೀಪದ ಕರೋಟಿ ಗ್ರಾಮದಲ್ಲಿ ಕೆಸರುಗದ್ದೆಯಂತಾಗಿರುವ ರಸ್ತೆಯಲ್ಲಿ ಗ್ರಾಮಸ್ಥರು ರಾಗಿ ಸಸಿ ನೆಟ್ಟು ರಸ್ತೆ ದುರಸ್ತಿಗಾಗಿ ಇತ್ತೀಚೆಗೆ ಪ್ರತಿಭಟನೆ ನಡೆಸಿದರು.
ಗ್ರಾಮ ಕುಗ್ರಾಮವಾಗಿದ್ದು ಮೂಲಸೌಲಭ್ಯಗಳಿಲ್ಲದೆ ಪರಿತಪಿಸುವಂತಾಗಿದೆ. ನಿತ್ಯ ಈ ರಸ್ತೆಯಲ್ಲಿ ಶಾಲಾ ಮಕ್ಕಳು, ವಯೋವೃದ್ಧರು, ಮಹಿಳೆಯರು, ರೈತರು ಓಡಾಡಬೇಕಿದೆ. ಸಣ್ಣದಾಗಿ ಮಳೆ ಬಂದರೂ ರಸ್ತೆ ಕೆಸರು ಗದ್ದೆಯಾಗಲಿದೆ. ಕಾಲಿಟ್ಟರೆ ಜಾರುತ್ತದೆ. ಅಲ್ಲಲ್ಲಿ ಗುಂಡಿಬಿದ್ದಿದೆ. ನಿತ್ಯ ಗುಂಡಿಯಲ್ಲಿ ಬಿದ್ದು ಏಳುವಂತಾಗಿದೆ. ರಸ್ತೆ ಜತೆಗೆ ಚರಂಡಿ ವ್ಯವಸ್ಥೆಯೂ ಇಲ್ಲದಂತಾಗಿದೆ. ಇದರಿಂದ ಸಾಂಕ್ರಾಮಿಕ ರೋಗ ಬಾಧೆಯಿಂದ ಗ್ರಾಮಸ್ಥರು ಬಳಲುವಂತಾಗಿದೆ ಎಂದು ಕಿಡಿಕಾರಿದರು.
ಗ್ರಾಮದ ಯುವ ಮುಖಂಡ ಹರೀಶ್ ಮಾತನಾಡಿ, ಹದಗೆಟ್ಟ ರಸ್ತೆಯಲ್ಲಿ ಖಾಸಗಿ ವಾಹನ, ಆಟೋಗಳು ಬರಲು ಹಿಂಜರಿಯುವಂತಾಗಿದೆ. ದೂರದ ಊರುಗಳಿಗೆ ತೆರಳಲು ಕಷ್ಟವಾಗಿದೆ. ಕನಿಷ್ಠ ರಸ್ತೆ ಸಂಪರ್ಕವಾದರೂ ಸುಧಾರಣೆಯಾದರೆ ನೆಮ್ಮದಿಯಾಗಿ ಓಡಾಡಬಹುದು. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಇತ್ತ ಗಮನಹರಿಸಿ ಗ್ರಾಮದ ಪ್ರಮುಖ ಸಮಸ್ಯೆಯಾದ ರಸ್ತೆಯನ್ನು ದರುಸ್ತಿಗೊಳಿಸಿ, ಡಾಂಬರೀಕರಣ ಮಾಡಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಚಂದ್ರೇಗೌಡ, ದಿನೇಶ್, ಪಾಪೇಗೌಡ, ಶಂಕರ್, ಶೇಖರ್, ಗುಂಡೇಗೌಡ, ಪ್ರಸನ್ನ, ಗೋಪಾಲೇಗೌಡ, ರಮೇಶ್, ದೇವರಾಜು, ಯಶೋದಮ್ಮ, ಚಿಕ್ಕಮ್ಮ, ತಾಯಮ್ಮ, ಜಯಂತಿ, ಗೀತಾ, ರೇಣುಕಾ ಪ್ರತಿಭಟನೆಯಲ್ಲಿದ್ದರು.