ಕೆಸರುಗದ್ದೆಯಂತಾದ ರಟ್ಟಿಹಳ್ಳಿ ಪಪೂ ಕಾಲೇಜ್ ರಸ್ತೆ

Rattihalli Govt School Road
Published on

ರಟ್ಟಿಹಳ್ಳಿ: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜ್​ಗೆ ಮುಖ್ಯ ರಸ್ತೆಯಿಂದ ಕಾಲೇಜ್​ಗೆ ತೆರಳುವ ಕಚ್ಚಾ ರಸ್ತೆ ಮಳೆಯಿಂದಾಗಿ ಕೆಸರುಗದ್ದೆಯಂತಾಗಿದ್ದು ವಿದ್ಯಾರ್ಥಿಗಳು ಕಾಲೇಜಿಗೆ ತೆರಳಲು ಹರಸಾಹಸ ಪಡಬೇಕಾಗಿದೆ.

ಪ್ರಸ್ತುತ 140 ವಿದ್ಯಾರ್ಥಿಗಳು ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಕಾಲೇಜ್​ಗೆ ಆಗಮಿಸುತ್ತಾರೆ. ಹಿರೇಕೆರೂರ ಮುಖ್ಯ ರಸ್ತೆಯಿಂದ ಸುಮಾರು 300 ಮೀಟರ್ ಅಂತರದಲ್ಲಿರುವ ಕಾಲೇಜ್​ಗೆ ತೆರಳಲು ಕಚ್ಚಾ ರಸ್ತೆ ಇದೆ. ಮಳೆಗಾಲದಲ್ಲಿ ಈ ರಸ್ತೆ ಮತ್ತು ಕಾಲೇಜಿನ ಮೈದಾನದಲ್ಲಿ ಸಂಪೂರ್ಣವಾಗಿ ನೀರು ನಿಂತು ಕೆಸರುಗದ್ದೆಯಂತಾಗುತ್ತದೆ. ಈ ಕಚ್ಚಾ ರಸ್ತೆಯಲ್ಲಿ ವಾಹನಗಳು ಇರಲಿ ವಿದ್ಯಾರ್ಥಿಗಳು ನಡೆದುಕೊಂಡು ಹೋಗಲೂ ಸಾಧ್ಯವಾಗುತ್ತಿಲ್ಲ. ಒಮ್ಮೊಮ್ಮೆ ಅಡಿಗಟ್ಟಲೇ ಕೆಸರು ತುಂಬಿರುತ್ತದೆ. ಇದರಿಂದ ವಿದ್ಯಾರ್ಥಿಗಳು ಕೃಷಿ ಇಲಾಖೆಯ ಕೋಲ್ಡ್ ಸ್ಟೋರೇಜ್ ಕಟ್ಟಡದ ಪಕ್ಕದ ರಸ್ತೆಯಲ್ಲಿ ಓಡಾಡುತ್ತಿದ್ದಾರೆ. ಈ ರಸ್ತೆಯೂ ಕಚ್ಚಾ ಆಗಿರುವುದರಿಂದ ಅಲ್ಲಿಯೂ ಕೆಸರು ಇರುತ್ತದೆ. ಕೆಲವೊಮ್ಮೆ ಇಲ್ಲಿ ವಿದ್ಯಾರ್ಥಿಗಳು ಬಿದ್ದ ಉದಾಹರಣೆಯೂ ಇದೆ.

ಶಿಕ್ಷಣ ಇಲಾಖೆ ಸರ್ಕಾರದಿಂದ ಅನುದಾನ ಮಂಜೂರು ಮಾಡಿಸಿ, ಕಾಲೇಜಿಗೆ ತೆರಳಲು ಉತ್ತಮ ರಸ್ತೆ ವ್ಯವಸ್ಥೆ ಮಾಡಬೇಕು ಎಂಬುದು ವಿದ್ಯಾರ್ಥಿಗಳೂ ಒತ್ತಾಯಿಸಿದ್ದಾರೆ.

ಕಾಲೇಜ್ ಸುತ್ತಲೂ ಕಾಂಪೌಂಡ್ ವ್ಯವಸ್ಥೆ ಇಲ್ಲದಿರುವುದರಿಂದ ರಾತ್ರಿ ವೇಳೆ ಕಿಡಿಗೇಡಿಗಳು ಆವರಣದಲ್ಲಿ ಮದ್ಯಪಾನ ಮಾಡಿ ಎಲ್ಲೆಂದರಲ್ಲಿ ಬಾಟಲಿ ಎಸೆಯುತ್ತಿದ್ದಾರೆ. ಅಲ್ಲದೆ, ಕೊಠಡಿಗಳ ಕಿಟಕಿಯ ಗಾಜಿಗೆ ಹಾನಿ ಮಾಡುತ್ತಿದ್ದಾರೆ.

ಕಾಲೇಜಿನ ರಸ್ತೆ ಕಚ್ಚಾ ಆಗಿರುವುದರಿಂದ ಪ್ರತಿವರ್ಷ ಮಳೆಗಾಲದಲ್ಲಿ ಐದಾರು ತಿಂಗಳು ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಕಾಲೇಜಿನವರೆಗೆ ವಾಹನಗಳು ಬಾರದೇ ದೂರದಲ್ಲಿ ನಿಲ್ಲಿಸಿ ತೆರಳಬೇಕು. ಸರ್ಕಾರ ಕೂಡಲೇ ಕಾಲೇಜಿಗೆ ತೆರಳಲು ಉತ್ತಮವಾದ ರಸ್ತೆ ನಿಮಾಣ ಮಾಡಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಬೇಕಾಗಿದೆ. | ನಾಗನಗೌಡ ಕೋಣ್ತಿ, ಉಪಾಧ್ಯಕ್ಷ ಕಾಲೇಜ್ ಅಭಿವೃದ್ಧಿ ಸಮಿತಿ ರಟ್ಟಿಹಳ್ಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net