ಕೆಸರು ಗದ್ದೆಯಲ್ಲಿ ಮಿಂದೆದ್ದ ಖಾರ್ಗಾದ ಜನ

IMG-20230813-WA0119
Published on

ಕಾರವಾರ: ಖಾರ್ಗಾದಲ್ಲಿ ಭಾನುವಾರ ಕೆಸರು ಗದ್ದೆ ಕ್ರೀಡಾಕೂಟದ ಸಂಭ್ರಮ ಮನೆ ಮಾಡಿತ್ತು.‌

ವೈಲವಾಡ ಗ್ರಾಪಂ ವ್ಯಾಪ್ತಿಯ ಮಾಂಡೆಬೋಳಾದಲ್ಲಿ ಸ್ಥಳೀಯ ನಾಗರಿಕರು,‌ ಪತ್ರಿಕಾ ಭವನ ನಿರ್ವಹಣಾ ಸಮಿತಿ ಸಹಯೋಗದಲ್ಲಿ ಕ್ರೀಡಾಕೂಟ ಆಯೋಜಿಸಿದ್ದರು.

ಲಿಂಬು ಚಮಚ, 50 ಮೀಟರ್ ಓಟ, ಹಗ್ಗ ಜಗ್ಗಾಟ, ವಾಲಿಬಾಲ್ ಹೀಗೆ, ಮಕ್ಕಳು, ಮಹಿಳೆಯರು, ಪುರುಷರು, ಪತ್ರಕರ್ತರು ಹೀಗೆ ಬೇರೆ ಬೇರೆ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದವು.

ವೈಲವಾಡ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೇಘನಾ ಗಾಂವಕರ ಗದ್ದೆ ನಾಟಿ ಮಾಡಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ದಶಕಗಳ ಹಿಂದೆ ಎತ್ತು-ಕೋಣಗಳನ್ನು ಬಳಸಿ ಉಳುಮೆ ಮಾಡಲಾಗುತ್ತಿತ್ತು. ಆದರೆ ಈಗ ಕೃಷಿ ಕ್ಷೇತ್ರವೂ ಆಧುನಿಕತೆಗೆ ಒಳಗಾಗಿದ್ದು, ಬಹುತೇಕ ಕೆಲಸಕಾರ್ಯ ಯಂತ್ರಗಳಿಂದಲೇ ಆಗುತ್ತಿದೆ. ಅಲ್ಲದೆ ಈಗ ಹೆಚ್ಚಿನ ಜನ ಕೃಷಿಯನ್ನೇ ಬಿಟ್ಟು ಬಿಟ್ಟಿರುವುದರಿಂದ ಇಂದಿನ ಮಕ್ಕಳಿಗೆ ಕೆಸರು ಎಂದರೇನು ಎನ್ನುವುದೇ ಗೊತ್ತಿಲ್ಲ. ಶಿಕ್ಷಣ ಪಡೆದು ಬೇರೆ ಬೇರೆ ಕಡೆ ಉದ್ಯೋಗದಲ್ಲಿ ಇರುವವರು ಊರಿಗೆ ಬಂದಾಗ ಹಾಗೂ ಪಾಲಕರು ತಮ್ಮ ಮಕ್ಕಳಿಗೆ ಭತ್ತ ಹೇಗೆ ಬೆಳೆಯಲಾಗುತ್ತದೆ ಎನ್ನುವುದನ್ನು ತೋರಿಸಕೊಡಬೇಕು ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಗ್ರಾಮೀಣ ಭಾಗದಲ್ಲಿ ಎಕರೆಗಟ್ಟಲೆ ಹೊಲಗಳಲ್ಲಿ ಕೃಷಿ ಚಟುವಟಿಕೆ ಮಾಡದೇ ಖಾಲಿ ಇರುವುದು ನೋಡಲು ಬೇಸರವಾಗುತ್ತಿದೆ. ಹಿರಿಯರಿಗೆ ಕೃಷಿ ಮಾಡುವ ಉತ್ಸಾಹ ಇದೆ. ಇದಕ್ಕೆ ಪೂರಕವಾಗಿ ಇಂದಿನ ಯುವಜನರ ಸಹಕಾರ ಅವಶ್ಯಕ ಎಂದರು.

ಗ್ರಾಪಂ ಉಪಾಧ್ಯಕ್ಷ ರಾಜೇಂದ್ರ ರಾಣೆ, ನಮ್ಮ ಗ್ರಾಮದಲ್ಲಿ ಇಂದು ಹಬ್ಬದ ವಾತಾವರಣವಿದೆ. ಯುವ ಪೀಳಿಗೆಗೆ ಕೆಸರು ಗದ್ದೆ ಓಟದ ರೂಪದಲ್ಲಿ ರೈತರ ಜೀವನ ತೋರಿಸಬೇಕಾದ ಪರಿಸ್ಥಿತಿ ಬಂದಿದೆ. ಗದ್ದೆ, ಕೆಸರು ಇಲ್ಲದೇ ಮನುಷ್ಯನ ಹೊಟ್ಟೆ ತುಂಬಲು ಸಾದ್ಯವಿಲ್ಲ. ಇಲ್ಲಿ ಪಾಲ್ಗೊಳ್ಳುವ ಸ್ಪರ್ಧಿಗಳು ಕ್ರೀಡಾಮನೋಭಾವದಿಂದ ತೊಡಗಿಕೊಳ್ಳಬೇಕು ಎಂದು ಹೇಳಿದರು.
ನಗರಸಭೆಯ ಮಾಜಿ ಸದಸ್ಯ ದೇವಿದಾಸ ನಾಯ್ಕ, ದೇಶದ ಬೆನ್ನೆಲುಬಾದ ರೈತರ ಹಾಗೂ ಸಮಾಜಕ್ಕೆ ನ್ಯಾಯ ಒದಗಿಸುವ ಪತ್ರಕರ್ತರ ಸಹಕಾರದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ರೈತರಿಲ್ಲರಿದ್ದರೆ ಹೇಗೆ ಕಷ್ಟವೊ ಅದೇ ರೀತಿ ಪತ್ರಕರ್ತರಿಲ್ಲದಿದ್ದರೂ ಸಮಾಜಕ್ಕೆ ಒಳಿತು ಆಗುವುದಿಲ್ಲ. ನಾನು ಆಧುನಿಕ ಜಗತ್ತಿನಲ್ಲಿ ಬದುಕಿರಲು ರೈತರು ಕಾರಣ, ಸಮಾಜದಲ್ಲಿ ನೆಮ್ಮದಿಯಿಂದ ಇರಲು ಮಾಧ್ಯಮದವರು ಕಾರಣರಾಗಿದ್ದಾರೆ.

ಇಂದಿನ ದಿನಮಾನದಲ್ಲಿ ರೈತರು ಬೆಳೆ ಬೆಳೆಯಲು ಸಾಕಷ್ಟು ಕಷ್ಟ ಪಡುತ್ತಿದ್ದಾರೆ. ಕೃಷಿ ನಷಿಸುತ್ತಿದೆ. ಸರ್ಕಾರದಿಂದ ಕೃಷಿಗೆ ಮತ್ತಷ್ಟು ಪ್ರೋತ್ಸಾಹ ಸಿಗಬೇಕಿದೆ ಎಂದರು.
ಜಿಲ್ಲಾ ವರ್ತಾಧಿಕಾರಿ ಜಯಂತ ಎಚ್.ವಿ., ಭಾರತ ಕೃಷಿ ಪ್ರಧಾನವಾದ ದೇಶವಾಗಿದೆ. ಆದರೆ ಯುವಜನಾಂಗ ಕೃಷಿಯಲ್ಲಿ ಆಸಕ್ತಿ ತೋರುತ್ತಿಲ್ಲ.

ಈ‌ ಗ್ರಾಮದ ಜನರು ಇಂತಹ ಕಾರ್ಯಕ್ರಮ ಆಯೋಜಿಸುವ ಮೂಲಕ ಯುವಜನಾಂಗವನ್ನು ಪ್ರೇರೇಪಿಸುವ ಕೆಲಸವನ್ನು ಮಾಡಿದ್ದಾರೆ. ನಶಿಸುತ್ತಿರುವ ಕೃಷಿಯನ್ನು ಜೀವಂತವಾಗಿರಿಸಲು ಸಹಕಾರಿಯಾಗಿದೆ‌ ಎಂದರು.‌
ಜಿಲ್ಲಾ ಪತ್ರಿಕಾಭವನ ನಿರ್ವಹಣಾ ಸಮಿತಿ ಅದ್ಯಕ್ಷ ಟಿ.ಬಿ.ಹರಿಕಂತ, ಕಳೆದ ಹಲವಾರು ವರ್ಷದಿಂದ ಗ್ರಾಮೀಣ ಭಾಗದಲ್ಲಿ ಕೆಸರುಗದ್ದೆ ಕ್ರೀಡಾಕೂಟ, ಗದ್ದೆ ನಾಟಿ ಕಾರ್ಯಕ್ರಮ ಮಾಡಿಕೊಂಡು ಬರಲಾಗುತ್ತಿದೆ. ಕೃಷಿ ಭೂಮಿಗಳನ್ನು ಹಾಳು ಬಿಡಲಾಗುತ್ತಿದೆ. ಕೃಷಿಯತ್ತ ಒಲವು ಮೂಡಿಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ರವಿಕಾಂತ ಹಾಗೂ ರವಿ ಕಸ್ಬೇಕರ ಅತ್ಯಂತ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದ್ದಾರೆ ಎಂದು ಅಭಿನಂದಿಸಿದರು.
ನಗರಸಭೆ ಮಾಜಿ ಸದಸ್ಯೆ ದಿವ್ಯಾ ನಾಯ್ಕ‌, ಸಂಘಟಕ ರವಿಕಾಂತ ಸಾವಂತ, ರವಿ ಕಸ್ಬೇಕರ, ಸ್ಥಳೀಯ ಗ್ರಾಪಂ ಸದಸ್ಯೆ ನಯನ ಬೋರ್ಕರ, ನಿರ್ಣಾಯಕ ಮಾಹಾದೇವ ರಾಣೆ ಉಪಸ್ಥಿತರಿದ್ದರು.

ಸನ್ಮಾನ
ಶಾಂತಾ ಕೆ ಸಾವಂತ (ನಿವೃತ್ತ ಸೈನಿಕ, ಎರ್ಪೋರ್ಸ್ನಲ್ಲಿ ಕೆಲಸ ಮಾಡಿದ್ದವರು), ಮಲ್ಲು ಜಿ ಸಾವಂತ (ನಿವೃತ್ತ ಸೈನಿಕ),
ದೇವಿದಾಸ ಕಾಣಕೋಣಕರ (ನಾಟಿ ಹಾಗು ಪಶು ವೈದ್ಯ), ಅಶೋಕ ದೇವಳಿ (ರೈತ), ಸುರೇಶ ಸಾವಂತ (ರೈತ), ದತ್ತಾ ಸಾವಂತ (ರೈತ), ವಿದ್ಯಾಧರ ಕಸ್ಬೇಕರ(ನಾಟಕ ನಿರ್ದೇಶಕ) ಅವರನ್ನು ಇದೇ ವೇಳೆ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net