ಕೆಸರು ಗದ್ದೆಯಂತಾದ ಕೋಗಳಿ ತಾಂಡಾ ರಸ್ತೆ

hbhalli road
ಕೋಗಳಿ ತಾಂಡಾ ರಸ್ತೆಯಲ್ಲಿ ಸಂಗ್ರಹವಾದ ಕೊಳಚೆ ನೀರಿನ ಮಧ್ಯೆ ಶಾಲೆಗೆ ಹೊರಟಿರುವ ಮಕ್ಕಳು.
Published on

ಹಗರಿಬೊಮ್ಮನಹಳ್ಳಿ: ಮಾಲವಿ ಗ್ರಾಪಂ ವ್ಯಾಪ್ತಿಗೆ ಒಳಪಡುವ ಕೋಗಳಿ ತಾಂಡಾ (ಶ್ರೀರಾಮನಗರ)ದಲ್ಲಿ ರಸ್ತೆಗೆ ಹದಗೆಟ್ಟಿದ್ದು, ಸಾರ್ವಜನಿಕರು ಹಾಗೂ ಶಾಲಾ ಮಕ್ಕಳು ರಸ್ತೆಯಲ್ಲಿ ನಿಂತಿರುವ ಕೊಳಚೆ ನೀರಿನಲ್ಲಿಯೇ ಓಡಾಡುವಂತಾಗಿದೆ.

ಇಲ್ಲಿನ ಸರ್ಕಾರಿ ಹಿಪ್ರಾ ಶಾಲೆ, ದೇವಸ್ಥಾನಕ್ಕೆ ತೆರಳುವ ಪ್ರಮುಖ ರಸ್ತೆಯಾಗಿದ್ದು, ಮಳೆ ಬಂತೆಂದರೆ ಕೆಸರು ಗದ್ದೆಯಂತಾಗುತ್ತದೆ. ಅಲ್ಲದೆ ಗ್ರಾಮದಲ್ಲಿ ಹರಿವ ಚರಂಡಿ ನೀರು ಇಲ್ಲಿ ಬಂದು ನಿಲ್ಲುತ್ತದೆ. ಇದರಿಂದ ಸೊಳ್ಳೆ ಕಾಟವೂ ಹೆಚ್ಚಾಗಿ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಈ ಬಗ್ಗೆ ಗ್ರಾಪಂಗೆ ಹಲವು ಸಲ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.

ಬಹುತೇಕ ಮನೆಗಳ ವ್ಯರ್ಥನೀರು ಹರಿದು ಹೋಗಲು ಸರಿಯಾದ ಚರಂಡಿ ವ್ಯವಸ್ಥೆ ಇಲ್ಲ. ಮುಂದೆ ದಿಬ್ಬವಿದೆ, ಹಿಂದೆ ನೀರು ನಿಲ್ಲುತ್ತದೆ. ಆದ್ದರಿಂದ ಆದ್ದರಿಂದ ಗುಣಮಟ್ಟದ ಸಿಸಿ ರಸ್ತೆ ನಿರ್ಮಾಣಕ್ಕೆ ಕ್ರಿಯಾ ಯೋಜನೆ ರೂಪಿಸಿ ಕೆಲಸ ಆರಂಭಿಸಬೇಕು ಎಂದು ಗ್ರಾಮಸ್ಥರಾದ ಆರ್.ಪ್ರಕಾಶ್, ಟಿ.ಪಾಂಡುನಾಯ್ಕ ಇತರರು ಒತ್ತಾಯಿಸಿದ್ದಾರೆ.

ರಸ್ತೆ ಹಾಳಾಗಿರುವ ಕುರಿತು ನಮ್ಮ ಗಮನಕ್ಕೆ ಬಂದಿದೆ. ಒಂದೆರಡು ಬಾರಿ ಸ್ಥಳ ಪರಿಶೀಲಿಸಿ, ನರೇಗಾ ಯೋಜನೆಯಲ್ಲಿ ಕ್ರಿಯಾಯೋಜನೆ ತಯಾರಿಸಿದ್ದೇವೆ. ಏರಿಯಾದ ಜನರ ಮನವೊಲಿಸಿ ಕೆಲಸ ಮಾಡಿಸಬೇಕಾಗಿದೆ. ಶೀಘ್ರವೇ ಕಾಮಗಾರಿ ಆರಂಭಿಸುತ್ತೇವೆ.

| ಶ್ರೀಕಾಂತ್ ನಾಯ್ಕ, ಪಿಡಿಒ, ಮಾಲವಿ ಗ್ರಾಪಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net