

ಚಿಕ್ಕಬಳ್ಳಾಪುರ: ಯಾವುದೇ ಸ್ವಾರ್ಥವಿಲ್ಲದೇ ಸುಸ್ಥಿರ ಆರೋಗ್ಯ ಸೇವೆ ಒದಗಿಸಲು ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಅಭಿಪ್ರಾಯಪಟ್ಟರು.
ತಾಲೂಕಿನ ಮುದ್ದೇನಹಳ್ಳಿಯಲ್ಲಿನ ಸತ್ಯಸಾಯಿ ಲೋಕಸೇವಾ ಸಂಸ್ಥೆಯ ಪ್ರೇಮಾಮೃತಂ ಸಭಾ ಭವನದಲ್ಲಿ ಕೈಗೊಂಡಿದ್ದ ರಾಷ್ಟ್ರೀಯ ಆರೋಗ್ಯ ಕಾಳಜಿ ಸಮಾವೇಶವನ್ನುದ್ದೇಶಿಸಿ ಮಾತನಾಡಿದರು.
ಭಾರತದ ಇತಿಹಾಸವನ್ನು ಆವಲೋಕಿಸಿದಾಗ ರಾಜ ಮಹಾರಾಜರುಗಳು ಆಡಳಿತದಾವಧಿಯಲ್ಲಿ ಜನರ ಆರೋಗ್ಯದ ಬಗೆಗಿನ ಹೆಚ್ಚಿನ ಕಾಳಜಿ ವಹಿಸುತ್ತಿದ್ದ ನಿದರ್ಶನಗಳ ಅರಿವಾಗುತ್ತದೆ. ಇತರೆ ರಾಷ್ಟ್ರಗಳಿಗೆ ಹೋಲಿಸಿದಾಗ ಈ ದೇಶವು ಸಾಂಸ್ಕೃತಿಕ, ಶೈಕ್ಷಣಿಕ, ಆರೋಗ್ಯದಾಯಕ ಯಾತ್ರಾಸ್ಥಳವಾಗಿ ಗುರುತಿಸಿಕೊಂಡಿದೆ ಎಂದರು.
ಆರೋಗ್ಯ ಕಾಳಜಿಯು ಜೀವನದಲ್ಲಿ ಪ್ರಮುಖವಾದುದು. ಇದರ ಸೇವೆಗಳು ಅಗತ್ಯವಿರುವವರಿಗೆ ಸಕಾಲದಲ್ಲಿ ದೊರೆಯಬೇಕಾಗಿದೆ. ಈ ಬಗ್ಗೆ ಅನೇಕ ಸಂಸ್ಥೆಗಳು ಕಳಕಳಿಯನ್ನು ತೋರುತ್ತಿವೆ. ಆದರೆ, ಅವುಗಳಿಗೆ ಅದರದ್ದೇ ಆದ ಇತಿಮಿತಿಗಳಿವೆ. ಆರೋಗ್ಯ ಸಂಬಂಧಿತ ಬೇಡಿಕೆ ಮತ್ತು ಪೂರೈಕೆಯಲ್ಲಿ ಅಜಗಜಾಂತರ ವ್ಯತ್ಯಾಸವಿದ್ದು ಆರೋಗ್ಯ ಸೇವೆ ದುಸ್ತರವಾಗಿದೆ. ಉಚಿತವಾಗಿ ದೊರೆಯಬೇಕಾದ ಸವಲತ್ತುಗಳು ಭ್ರಷ್ಟ ವ್ಯವಸ್ಥೆಯಿಂದಾಗಿ ಮಧ್ಯದಲ್ಲಿ ಸೋರಿಕೆಯಾಗುತ್ತದೆ. ಎಲ್ಲವನ್ನೂ ಎಲ್ಲರಿಗೂ ಎಲ್ಲ ಕಾಲದಲ್ಲೂ ಉಚಿತವಾಗಿ ನೀಡಲು ಸಾಧ್ಯವಿಲ್ಲ. ಇನ್ನು ಎಲ್ಲರ ಸಹಕಾರ ಸಿಕ್ಕಿದಾಗ ಯಾವುದೂ ಅಸಾಧ್ಯವಲ್ಲ ಎಂದರು.
ಆರೋಗ್ಯ ಸೇವೆಯು ಎಂದಿಗೂ ವ್ಯವಹಾರ ಆಗಬಾರದು. ಮಾನವೀಯ ಸ್ಪಂದನೆಯ ಸ್ಪರ್ಶವಿರಬೇಕು. ಜನರ ಸಮಸ್ಯೆಗಳನ್ನು ಲಾಭಕ್ಕಾಗಿ ಬಳಸುವ ಕೆಟ್ಟ ಪರಿಸ್ಥಿತಿಯು ನಿರ್ನಾಮವಾಗಬೇಕು. ಸೇವಾ ದೃಷ್ಟಿಯಿಂದ ಮಾತ್ರ ಆರೋಗ್ಯ ಸುಧಾರಣೆಯನ್ನು ಸಾಧಿಸಬಹುದಾಗಿದೆ ಎಂದರು.
ಯುಎನ್ ಗ್ಲೋಬಲ್ ಕಾಂಪ್ಯಾಕ್ಟ್ ನೆಟ್ ವರ್ಕ್ ಇಂಡಿಯಾ ಸಂಸ್ಥೆಯ ಕಾರ್ಯ ನಿವಾರ್ಹಕ ನಿರ್ದೇಶಕ ರತ್ನೇಶ್ ಝಾ, ರಾಷ್ಟ್ರೀಯ ಮಟ್ಟದ ಸಮಾವೇಶವು ಪ್ರಸ್ತುತ ಆರೋಗ್ಯದಲ್ಲಿ ಎದುರಾಗಿರುವ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಮಾರ್ಗದರ್ಶಿ ಚಿಂತನೆಗಳನ್ನು ಪ್ರತಿಪಾದಿಸುವಲ್ಲಿ ಯಶಸ್ವಿಯಾಗಿದೆ ಎಂದರು.
ಸತ್ಯಸಾಯಿ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಸಿ.ಶ್ರೀನಿವಾಸ್ ಮಾತನಾಡಿ, ದೇಶದ ಸೇವಾ ಚಟುವಟಿಕೆ ಹಿನ್ನೆಲೆಯು ಪುರಾಣ ಇತಿಹಾಸಗಳಲ್ಲಿ ಉಲ್ಲೇಖಗೊಂಡಿದ್ದು ಇರಬೇಕಾದ ಬದ್ಧತೆಯನ್ನು ತಿಳಿಸುತ್ತವೆ. ಆರೋಗ್ಯದಿಂದ ಎಲ್ಲವೂ ಲಭ್ಯ. ಆದರೆ, ಇದು ವಾಣಿಜ್ಯ ಉದ್ದೇಶವನ್ನು ಹೊಂದಿರಬಾರದು. ನಿಸ್ವಾರ್ಥ ಮನೋಭಾವವನ್ನು ಹೊಂದಿರುವ ಶ್ರಮವು ನಿರೀಕ್ಷಿತ ಗುರಿಯನ್ನು ಯಾವುದೇ ಅನುಮಾನವಿಲ್ಲದೇ ಮುಟ್ಟುತ್ತದೆ ಎಂದರು.
ಸಂಪನ್ಮೂಲ ವ್ಯಕ್ತಿ ಡಾ ಸುಬ್ರಮಣ್ಯಂ ಮಾತನಾಡಿ, ಭವಿಷ್ಯದ ಪೀಳಿಗೆಯನ್ನು ಸುಸ್ಥಿರ ಆರೋಗ್ಯ ಸುಧಾರಣೆಗಾಗಿ ತರಬೇತಿಗೊಳಿಸಬೇಕಾಗಿದೆ. ಯಾವುದೇ ಸಂಘ ಸಂಸ್ಥೆಯು ಸರ್ಕಾರದ ಕಾರ್ಯಯೋಜನೆಗಳನ್ನು ಅನುಷ್ಠಾನಗೊಳಿಸಿದರೂ ಎಲ್ಲರೂ ಸಹಕಾರ ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ಯುಎನ್ ಗ್ಲೋಬಲ್ ಕಾಂಪ್ಯಾಕ್ಟ್ ನೆಟ್ ವರ್ಕ್ ಇಂಡಿಯಾ ಸಹಾಯಕ ನಿರ್ದೇಶಕ ಸೋಮನಾಥ್ ಸಿಂಗ್, ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ಕುಲಾಧಿಪತಿ ಬಿ.ಎನ್.ನರಸಿಂಹಮೂರ್ತಿ, ಸದ್ಗುರು ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿದ್ಯಾಲಯದ ನಿರ್ದೇಶಕ ಡಾ ಎ.ಆರ್.ರಘುಪತಿ ಮತ್ತಿತರರು ಇದ್ದರು.
* ಹಲವರ ಭಾಗಿ
ಪ್ರಶಾಂತಿ ಬಾಲಮಂದಿರ ಟ್ರಸ್ಟ್ , ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಮತ್ತು ಯು ಎನ್ ಗ್ಲೋಬಲ್ ನೆಟ್ ವರ್ಕ್ ಇಂಡಿಯಾ ಸಂಸ್ಥೆ ಕೈಗೊಂಡಿದ್ದ ರಾಷ್ಟ್ರೀಯ ಸಮಾವೇಶದಲ್ಲಿ ದೇಶದ ಹಾಗೂ ವಿದೇಶಗಳ ನಾನಾ ಭಾಗಗಳ ವೈದ್ಯಕೀಯ ವಿದ್ಯಾರ್ಥಿಗಳು, ಆರೋಗ್ಯ ತಜ್ಞರು, ಆರೋಗ್ಯ ಕಾರ್ಯಕರ್ತರು, ಸ್ಥಳೀಯ ಆರೋಗ್ಯ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.