

ಚಿಕ್ಕಬಳ್ಳಾಪುರ: ತಾಲೂಕಿನ ಮುದ್ದೇನಹಳ್ಳಿಯ ಶ್ರೀ ಸತ್ಯಸಾಯಿ ಲೋಕಸೇವಾ ಸಂಸ್ಥೆಯ ಸದ್ಗುರು ಶ್ರೀ ಮಧುಸೂದನ ಸಾಯಿಗೆ ಫಿಜಿ ದ್ವೀಪ ರಾಷ್ಟ್ರದ ಅತ್ಯುನ್ನತ ನಾಗರಿಕ ಸೇವಾ ಪುರಸ್ಕಾರ ಸಿಕ್ಕಿದೆ.
ಫಿಜಿಯ ಅಧ್ಯಕ್ಷ ರತು ನೈಕಾಮ ಲಾಲ್ ಬಲಾವು ಕಂಪ್ಯಾನಿಯನ್ ಆಫ್ ದಿ ಆರ್ಡರ್ ಆಫ್ ಫಿಜಿ' ಪ್ರಶಸ್ತಿಯನ್ನು ಸದ್ಗುರುಗಳಿಗೆ ಪ್ರದಾನ ಮಾಡಿದ್ದಾರೆ.
ಪೆಸಿಫಿಕ್ ಮತ್ತು ಸಾಗರೋತ್ತರ ಪ್ರದೇಶಗಳಲ್ಲಿ ಪರಿವರ್ತನಾತ್ಮಕ ಮಾನವೀಯ ಪ್ರಯತ್ನ ಹಾಗೂ ಸೇವೆಯಿಂದ ಗುರುತಿಸಲ್ಪಟ್ಟ ಸದ್ಗುರು ಶ್ರೀ ಮಧುಸೂದನ ಸಾಯಿ, ಪ್ರಶಸ್ತಿಯನ್ನು 'ಒಂದು ಜಗತ್ತು ಒಂದು ಕುಟುಂಬ' ಅಭಿಯಾನದ ಭಾಗವಾಗಿರುವ ಸ್ವಯಂಸೇವಕರು ಮತ್ತು ಜಾಗತಿಕ ಕುಟುಂಬಕ್ಕೆ ಸಮರ್ಪಿಸಿದ್ದಾರೆ.
ದ್ವೀಪ ರಾಷ್ಟ್ರದಲ್ಲಿ ಮೊದಲ ಸಂಪೂರ್ಣ ಉಚಿತ ಮಕ್ಕಳ ಹೃದ್ರೋಗ ಆಸ್ಪತ್ರೆಯನ್ನು ನಿರ್ಮಿಸುವುದರಿಂದ ಹಿಡಿದು ಜಾಗತಿಕ ಪೋಷಣೆ ಮತ್ತು ಆರೋಗ್ಯ ಸುಧಾರಣಾ ಚಾಲನಾ ಪ್ರವರ್ತಕರಾಗಿರುವ ಸದ್ಗುರುಗಳಿಗೆ ಸಿಕ್ಕಿದ ಪುರಸ್ಕಾರವು, ಭಾರತ ರತ್ನ ಗೌರವಕ್ಕೆ ಸರಿ ಸಮವಾಗಿದೆ.
ಮಾನವೀಯ ಪ್ರೇಮ, ಸೇವೆ ಮತ್ತು ಏಕತೆಗೆ ಮೀಸಲಾದ ಜೀವನವನ್ನು ಪ್ರತಿಬಿಂಬಿಸುವ ಸದ್ಗರುಗಳ ಮಾನವೀಯ ಸೇವೆಗೆ ಸಂದ ಅತ್ಯುನ್ನತ ಸಾರ್ಥಕ ಗೌರವ ಇದಾಗಿದೆ ಎಂದು ಲೋಕಸೇವಾ ಸಂಸ್ಥೆ ತಿಳಿಸಿದೆ.