

ಮುದ್ದೇಬಿಹಾಳ: ಪಟ್ಟಣದಲ್ಲಿ ವಿಜಯದಶಮಿ, ಆರ್‌ಎಸ್‌ಎಸ್ ವಾರ್ಷಿಕೋತ್ಸವ ಅಂಗವಾಗಿ ಶನಿವಾರ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪಥಸಂಚಲನ ಅದ್ದೂರಿಯಾಗಿ ನಡೆಯಿತು.
ಹುಡ್ಕೋದ ಗವಿಸಿದ್ಧೇಶ್ವರ ಕ್ರೀಡಾ ಮೈದಾನದಲ್ಲಿ ಸಾಂಪ್ರದಾಯಿಕವಾಗಿ ಶಾಖಾ ಪ್ರಾರ್ಥನೆ ಮೂಲಕ ಭಗವಾಧ್ವಜ ಆರೋಹಣದೊಂದಿಗೆ ಪಥಸಂಚಲನಕ್ಕೆ ಮಧ್ಯಾಹ್ನ 3-45 ಕ್ಕೆ ಚಾಲನೆ ನೀಡಲಾಯಿತು.
ವಾಹಿನಿ ಪ್ರಮುಖರ ಮುಂದಾಳತ್ವದಲ್ಲಿ ಪಥದರ್ಶಕರು, ಧ್ವಜವಾಹಿನಿ, ವಿಜಯಪುರ ಮತ್ತು ಮುದ್ದೇಬಿಹಾಳದ ಘೋಷ ತಂಡ, ವಿಜಯಪುರದ ಬ್ಯಾಂಡ್‌ಸೆಟ್ ತಂಡ ಪಟ್ಟಣದ ಎಲ್ಲ ಬಡಾವಣೆಗಳ ಪ್ರಮುಖ ಹಾಗೂ ಆಂತರಿಕ ರಸ್ತೆಗಳು, ವೃತ್ತಗಳಲ್ಲಿ ಅಂದಾಜು 4 ಕಿ.ಮೀ. ಸಂಚರಿಸಿ ವಿಬಿಸಿ ಪ್ರೌಢಶಾಲೆ ಮೈದಾನದಲ್ಲಿ 4.43ಕ್ಕೆ ಅಂತ್ಯಗೊಂಡಿತು.
ಸಮಾರೋಪದ ನಂತರ ಅಲ್ಪೋಪಾಹಾರ ಸೇವಿಸಿ ದಂಡ ಪ್ರದರ್ಶನ ನೀಡಲಾಯಿತು. ತಾಲೂಕು ಕಾರ್ಯವಾಹ ಚೇತನ ಮೂಗನೂರ, ಮುಖ್ಯಶಿಕ್ಷಕ ಆನಂದ ಚಿಕ್ಕೂರ, ಬಸಯ್ಯ ನಂದಿಕೇಶ್ವರ, ಡಾ.ಪರಶುರಾಮ ಪವಾರ, ಉದಯಸಿಂಗ್ ರಾಯಚೂರ, ಮಾಣಿಕಚಂದ ದಂಡಾವತಿ, ವಿಕ್ರಮ್ ಓಸ್ವಾಲ ಸೇರಿ ಹಲವು ಪ್ರಮುಖರು ಪಾಲ್ಗೊಂಡಿದ್ದರು.
ಪಥಸಂಚಲನ ಮಾರ್ಗದ ರಸ್ತೆಗಳನ್ನು ನೀರು ಹಾಕಿ ಸ್ವಚ್ಚಗೊಳಿಸಿ ರಂಗೋಲಿ, ಹೂವುಗಳಿಂದ ಅಲಂಕರಿಸಲಾಗಿತ್ತು. ಪಾಲಕರು ತಮ್ಮ ಮಕ್ಕಳಿಗೆ ಶರಣರು, ದಾರ್ಶನಿಕರು, ಐತಿಹಾಸಿಕ ಪುರುಷರು, ಮಹಿಳೆಯರು, ಸ್ವಾತಂತ್ರೃ ಹೋರಾಟಗಾರರ ವೇಷ ಹಾಕಿಸಿ ಸಂಭ್ರಮಿಸಿದರು.
ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಥಸಂಚಲನದ ಮೇಲೆ ಪುಷ್ಪವೃಷ್ಟಿಗರೆದು ಗೌರವಿಸಿದರು.
ಬಸವನಬಾಗೇವಾಡಿ ಡಿಎಸ್ಪಿ ಬಲ್ಲಪ್ಪ ನಂದಗಾಂವಿ, ಮುದ್ದೇಬಿಹಾಳ ಸಿಪಿಐ ಮಲ್ಲಿಕಾರ್ಜುನ ತುಳಸೀಗೇರಿ, ಪಿಎಸೈಗಳಾದ ಸಂಜಯ ತಿಪ್ಪರಡ್ಡಿ, ಆರ್.ಎಲ್.ಮನ್ನಾಭಾಯಿ, ರಾಮನಗೌಡ ಸಂಕನಾಳ ಸೇರಿ ಬಸವನಬಾಗೇವಾಡಿ ಉಪವಿಭಾಗ ವ್ಯಾಪ್ತಿಯ ಎಲ್ಲ ಪೊಲೀಸ್ ಠಾಣೆಗಳ 100ಕ್ಕೂ ಹೆಚ್ಚು ಸಿಬ್ಬಂದಿ ಬಂದೋಬಸ್ತ್ ಏರ್ಪಡಿಸಿದ್ದರು.
ಡಿಎಸ್ಪಿ ಸೇರಿ ಬಹುತೇಕ ಪೊಲೀಸರು ಪಥಸಂಚಲನದೊಂದಿಗೆ ಸಂಚರಿಸಿ ಗಮನಸೆಳೆದರು.