

ಶಂಕರ ಈ.ಹೆಬ್ಬಾಳ ,
ಮುದ್ದೇಬಿಹಾಳ: ಹೌದು. ಇಂತದ್ದೊಂದು ತಲೆನೋವು ತಾಲೂಕಿನ ಅಧಿಕಾರಿಗಳನ್ನಷ್ಟೇ ಅಲ್ಲ ಸ್ವತಃ ಪಂಚಾಯಿತಿ ಮೇಂಬರ್ ಆಗಬೇಕು ಎಂದು ಬಯಸುವವರ ಆಸೆಗೆ ಹೊಸದಾಗಿ ಗ್ರಾಮ ಪಂಚಾಯಿತಿ ಚುನಾವಣೆಗೆಂದು ಪ್ರಕಟಿಸಿರುವ ಮತದಾರರ ಪಟ್ಟಿಯೇ ಖಳನಾಯಕನಂತೆ ಕಾಣತೊಡಗಿದೆ.
ಗ್ರಾಪಂ ಚುನಾವಣೆ ಘೋಷಣೆಯಾಗಿದ್ದು ಅದಕ್ಕೆ ಪಂಚಾಯಿತಿವಾರು ಪ್ರತ್ಯೇಕ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ವಿಶೇಷ ಎಂದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮತ ಚಲಾಯಿಸಿದವರ ಹೆಸರುಗಳು ಹೊಸದಾಗಿ ಪ್ರಕಟಿಸಿರುವ ಮತದಾರರ ಪಟ್ಟಿಯಿಂದ ನಾಪತ್ತೆಯಾಗಿವೆ. ಇದರಿಂದ ಕಂಗಾಲಾಗಿರುವ ಆಕಾಂಕ್ಷಿಗಳು ದಿನವೂ ತಹಸೀಲ್ದಾರ್ ಕಚೇರಿಯ ಚುನಾವಣೆ ವಿಭಾಗಕ್ಕೆ ಎಡತಾಕುತ್ತಿದ್ದಾರೆ.
ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಕಾಣದಿರುವ ಕುರಿತು ಅಧಿಕಾರಿಗಳನ್ನು ವಿಚಾರಣೆ ನಡೆಸುತ್ತಿದ್ದಾರೆ. ಅರ್ಜಿ ಕೊಡದಿದ್ದರೂ ಕಳೆದುಕೊಂಡಿರುವ ತಮ್ಮ ಹಕ್ಕನ್ನು ಮರಳಿ ಹೇಗೆ ಗಳಿಸಿಕೊಳ್ಳಬೇಕು ಎಂದು ಹಲವಾರು ಬಗೆಯ ದಾರಿಯನ್ನು ಹುಡುಕಾಡುತ್ತಿದ್ದಾರೆ.
ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿ ಹೆಸರೇ ನಾಪತ್ತೆ
ತಾಲೂಕಿನ ಕವಡಿಮಟ್ಟಿ ಗ್ರಾಪಂ ವ್ಯಾಪ್ತಿಯ ಸರೂರ ಗ್ರಾಮದ ಮತಕ್ಷೇತ್ರ ಸಂಖ್ಯೆ 3ರಿಂದ 2019ರ ಉಪ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಪ್ರಕಾಶ ಹೊಳಿ ಅವರ ಹೆಸರು ಹೊಸದಾಗಿ ಪ್ರಕಟಿಸಿರುವ ಮತದಾರರ ಪಟ್ಟಿಯಲ್ಲಿ ಬಂದಿಲ್ಲ. 2019 ನ.12 ರಂದು ಸರೂರ ಗ್ರಾಮದ ವಾರ್ಡ್ ಸಂಖ್ಯೆ 3ಕ್ಕೆ ನಡೆದಿದ್ದ ಉಪ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ನನ್ನ ಹೆಸರು ಈಗ ಮತದಾರರ ಪಟ್ಟಿಯಲ್ಲಿ ಇಲ್ಲ. ಇದರಿಂದ ನನಗೆ ದಿಕ್ಕೆ ತೋಚದಂತಾಗಿದೆ ಎಂದು ಪ್ರಕಾಶ ಹೊಳಿ ಅಳಲು ತೋಡಿಕೊಂಡಿದ್ದಾರೆ.
ಬಿಎಲ್‌ಒ ಜೊತೆಗೆ ಆಗಮಿಸಿ ವಿಚಾರಣೆ:
ಸರೂರ ಗ್ರಾಮದ ಮತದಾರರ ಪಟ್ಟಿಯನ್ನು ಗಮನಿಸುವ ಬಿಎಲ್‌ಒ ಎಚ್.ಎನ್. ನಾಗಾವಿ ಅವರೊಂದಿಗೆ ಪ್ರಕಾಶ ಹೊಳಿ ಪಟ್ಟಣದ ಮಿನಿವಿಧಾನಸೌಧದಲ್ಲಿರುವ ಚುನಾವಣೆ ಶಾಖೆಗೆ ಬಂದು ವಿಚಾರಿಸಿದಾಗ ನಮಗೇನೂ ಈ ಬಗ್ಗೆ ಗೊತ್ತಿಲ್ಲ. ಆಯೋಗದಿಂದ ಬಂದಿರುವ ಮತದಾರರ ಪಟ್ಟಿಯನ್ನು ನಾವು ಕೊಡುತ್ತಿದ್ದೇವೆ. ಅದರಲ್ಲಿ ಹೆಸರು ಹೋಗಿರುವುದು, ಬಂದಿರುವುದು ನಮಗೆ ತಿಳಿಯದು. ಹೆಸರು ತೆಗೆದು ಹಾಕುವ ಅಧಿಕಾರವೂ ನಮಗಿಲ್ಲ ಎಂದು ಶಿರಸ್ತೆದಾರ್ ಎ.ಎಚ್. ಬಳೂರಗಿ ಆಕಾಂಕ್ಷಿತರಿಗೆ ಹೇಳಿ ಕಳಿಸಿದ್ದಾರೆ.
ರದ್ದು ಆಗಿದ್ದು ಹೇಗೆ?
ಅಧಿಕೃತವಾಗಿ ಮತದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕಬೇಕಾದರೆ ಅರ್ಹ ವ್ಯಕ್ತಿಯಿಂದ ಸಂಬಂಧಿಸಿದ ಬಿಎಲ್‌ಒ ಅವರಿಗೆ ಅರ್ಜಿ ಕೊಟ್ಟಿರಬೇಕು. ಆದರೆ, ಇಲ್ಲಿ ಅರ್ಜಿ ಕೊಡದಿದ್ದರೂ ಮತದಾರರ ಪಟ್ಟಿಯಿಂದ ಹೆಸರುಗಳು ನಾಪತ್ತೆಯಾಗಿರುವ ದೂರುಗಳು ಕೇಳಿ ಬಂದಿವೆ. ಅದರಲ್ಲಿ ಯಾರ ಲೋಪ ಇದೆ ಎಂಬುದೇ ಯಕ್ಷಪ್ರಶ್ನೆಯಾಗಿದೆ. ಕಳೆದ ವರ್ಷ ಸ್ಪರ್ಧಿಸಿದ್ದ ವ್ಯಕ್ತಿಯ ಹೆಸರು ಈಗ ನಾಪತ್ತೆ ಆಗುತ್ತದೆ ಎಂದರೆ ಹೇಗೆ? ಡಿಲಿಟ್ ಮಾಡುವ ಅಧಿಕಾರ ಯಾರು ಹೊಂದಿದ್ದಾರೆ ? ಶಿಕ್ಷೆ ಯಾರಿಗೆ ಕೊಡುವುದು ? ಈ ಎಲ್ಲ ಪ್ರಶ್ನೆಗಳಿಗೆ ಮೇಲಧಿಕಾರಿಗಳಿಂದ ಉತ್ತರ ದೊರೆಯಬೇಕಿದೆ.
ಹುಲ್ಲೂರಿನಲ್ಲೂ ಸಮಸ್ಯೆ
ಹುಲ್ಲೂರ ಗ್ರಾಮದ ಭಾಗ ಸಂಖ್ಯೆ 59 ಮತ್ತು 60ರ ಮತದಾರರ ಪಟ್ಟಿಯಿಂದಲೂ ಇಬ್ಬರ ಹೆಸರುಗಳನ್ನು ತೆಗೆದು ಹಾಕಲಾಗಿದೆ ಎಂದು ಜೆಡಿಎಸ್ ತಾಲೂಕಾಧ್ಯಕ್ಷ ಪ್ರಭುಗೌಡ ಪಾಟೀಲ ತಹಸೀಲ್ದಾರ್‌ರಿಗೆ ಮನವಿ ಸಲ್ಲಿಸಿದ್ದಾರೆ. ಹುಲ್ಲೂರ ಗ್ರಾಮದ ಅಕ್ಷತಾ ಭೀಮನಗೌಡ ಕೊಡಗನೂರ ಹಾಗೂ ಗುರುಬಾಯಿ ಸಿ ಕೊಡಗಾನೂರ ಅವರ ಹೆಸರು ಹೊಸದಾಗಿ ಬಿಡುಗಡೆಯಾದ ಮತದಾರರ ಪಟ್ಟಿಯಿಂದ ಕೈ ಬಿಡಲಾಗಿದೆ. ಕಳೆದ ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಮತದಾನ ಮಾಡಿದ್ದರೂ ಇವರ ಹೆಸರು ಕಾಣೆಯಾಗಿರುವುದಕ್ಕೆ ಏನು ಕಾರಣ ಎಂಬುದೇ ತಿಳಿಯುತ್ತಿಲ್ಲ. ಮತದಾರರ ಪಟ್ಟಿಯಿಂದ ಆಯ್ದ ವ್ಯಕ್ತಿಗಳ ಹೆಸರು ಕಾಣೆಯಾಗಿರುವುದಕ್ಕೆ ಕಾರಣ ಕಾಣದ ಕೈಗಳ ಕೈವಾಡವೇ ? ಎಂಬ ಪ್ರಶ್ನೆ ಕಾಡುತ್ತಿದೆ ಎಂದು ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಭೀಮನಗೌಡ ಕೊಡಗಾನೂರ ದೂರಿದ್ದಾರೆ.
ಪ್ರತಿಕ್ರಿಯೆಗೆ ನಕಾರ
ಹಿಂದಿನ ಮತದಾರರ ಪಟ್ಟಿಯಲ್ಲಿ ಹೆಸರಿದ್ದು ಹೊಸ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದಿದ್ದವರು ನಮ್ಮ ಗಮನಕ್ಕೆ ಅಧಿಕೃತವಾಗಿ ಅರ್ಜಿ ಸಲ್ಲಿಸುವ ಮೂಲಕ ಗಮನಕ್ಕೆ ತರಬೇಕು. ಮುಂದೆ ಅದನ್ನು ಪರಿಶೀಲನೆ ನಡೆಸಲಾಗುತ್ತದೆ ಎಂದು ಪ್ರಭಾರಿ ತಹಸೀಲ್ದಾರ್ ಅನೀಲಕುಮಾರ ಢವಳಗಿ ತಿಳಿಸಿದ್ದಾರೆ. ಇನ್ನು ಮುಂದೆ ಸೇರ್ಪಡೆಯಾದ ಮತದಾರರಿಗೆ ಸ್ಪರ್ಧಿಸುವ ಹಕ್ಕು ಇರಲಿದೆಯೇ ಎಂಬ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನು ತಹಸೀಲ್ದಾರ್ ನೀಡಲಿಲ್ಲ.