

ಮುದ್ದೇಬಿಹಾಳ: ಜನರ ಪ್ರೀತಿಯಿಂದ ನಾನು ಶ್ರೀಮಂತನಾಗಿದ್ದೇನೆ. ದೈವಿಶಕ್ತಿಯ ಜೊತೆಗೆ ಹಿರಿಯರು, ಗುರುಗಳ ಮಾರ್ಗದರ್ಶನವೂ ಮಹತ್ವದ್ದಾಗಿದೆ. ಇವರೆಲ್ಲರ ಋಣ ಈ ಜನ್ಮದಲ್ಲಿ ತೀರಿಸಲು ಸಾಧ್ಯವಿಲ್ಲ ಎಂದು ಶಾಸಕ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ ಅಪ್ಪಾಜಿ ಹೇಳಿದರು.
ಮುದ್ದೇಬಿಹಾಳದ ಹುಡ್ಕೋದಲ್ಲಿರುವ ಗವಿಸಿದ್ಧೇಶ್ವರ ವೇದಿಕೆಯಲ್ಲಿ ಅಭಿಮಾನಿಗಳು ಶುಕ್ರವಾರ ಸಂಜೆ ಏರ್ಪಡಿಸಿದ್ದ ತಮ್ಮ 67ನೇ ಜನ್ಮದಿನ ಸಮಾರಂಭದಲ್ಲಿ ಸ್ವಾಮೀಜಿಗಳ ಆಶೀರ್ವಾದ, ಅಭಿಮಾನಿಗಳ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಅಧಿಕಾರ ಶಾಶ್ವತವಲ್ಲ ಅನ್ನೋದು ನನ್ನ ಅನುಭವ. ದ್ವೇಷ ರಾಜಕಾರಣ ಯಾರೂ ಮಾಡಬಾರದು. ಜನಸೇವೆ ರಾಜಕಾರಣಿಗಳ ಉಸಿರಾಗಿರಬೇಕು. ನಾನು ವ್ಯಕ್ತಿಗತವಾಗಿ ಯಾರನ್ನೂ ದ್ವೇಷಿಸುವುದಿಲ್ಲ. ಆದರೆ ಕೆಲವರ ನಡವಳಿಕೆ ವಿರೋಧಿಸುತ್ತೇನೆ ಎಂದರು.
ಹೊಸ ಸರ್ಕಾರ ಬಂದಾಗ ಅಭಿವೃದ್ಧಿ ಕೆಲಸಗಳಿಗೆ ವೇಗ ದೊರಕಲು ಸಮಯ ಹಿಡಿಯುತ್ತದೆ. ಮುಂಬರುವ ದಿನಗಳಲ್ಲಿ ಜನರ ನಿರೀಕ್ಷೆ ಹುಸಿಯಾಗದಂತೆ ಅಭಿವೃದ್ಧಿ ಕೈಗೆತ್ತಿಕೊಳ್ಳುತ್ತೇನೆ. ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಅವರ ಬದಲಾವಣೆಯ ವಿಚಾರ ಅಪ್ರಸ್ತುತ ಎಂದರು.
ಕಾಂಗ್ರೆಸ್ ಮುಖಂಡ, ಅಸ್ಕಿ ೌಂಡೇಷನ್ ಅಧ್ಯಕ್ಷ ಸಿ.ಬಿ.ಅಸ್ಕಿ ಮಾತನಾಡಿ, ಸಾಹೇಬರದ್ದು ಮಾತು ಕಡಿಮೆ ಕೆಲಸ ಹೆಚ್ಚು. ಮೃದು ಸ್ವಭಾವದ ಅವರು ಸುಳ್ಳು ಆಶ್ವಾಸನೆ ಕೊಡುವಂಥವರಲ್ಲ. ಕೆಲಸ ಆದ ಮೇಲೆಯೇ ಜನರಿಗೆ ಗೊತ್ತುಮಾಡುವುದು ಅವರ ಮನೋಭಾವ. ಅವರು ಪ್ರಚಾರಪ್ರಿಯರಲ್ಲ ಎಂದು ಹೇಳಿದರು.
ಮುಖಂಡರಾದ ಎಂ.ಬಿ.ನಾವದಗಿ, ಬಿ.ಎಸ್.ಪಾಟೀಲ ಯಾಳಗಿ, ಅಬ್ದುಲ್‌ಗೂರ ಮಕಾನದಾರ, ಶಂಕರಗೌಡ ಹಿರೇಗೌಡರ, ಎಸ್.ಎಸ್.ಹುಲ್ಲೂರ, ವೈ.ಎಚ್.ವಿಜಯಕರ್, ನೇತಾಜಿ ನಲವಡೆ, ಶಿಕ್ಷಕ ಬಸವರಾಜ ಹಂಚಲಿ ಮಾತನಾಡಿದರು.
ಇಂಗಳೇಶ್ವರ ವಚನಶಿಲಾ ಮಂಟಪದ ಚನ್ನಬಸವ ಶಿವಾಚಾರ್ಯರು, ಕುಂಟೋಜಿ ಹಿರೇಮಠದ ಡಾ.ಶ್ರೀಗುರು ಚನ್ನವೀರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಆಶಿರ್ವಚನ ನೀಡಿದರು. ಶಾಸಕರ ಪತ್ನಿ ಸುವರ್ಣಾದೇವಿ, ಮೊಮ್ಮಗಳು ಅನಧ್ಯ ನಾಡಗೌಡಶೆಟ್ಟಿ ವೇದಿಕೆಯಲ್ಲಿದ್ದರು.
ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ.ಬಿರಾದಾರ, ನಿರ್ದೇಶಕ ನೀಲಕಂಠರಾವ್ ದೇಶಮುಖ (ಕುಂಚಗನೂರ) ನೇತೃತ್ವದಲ್ಲಿ ಪಿಎಲ್‌ಡಿ ಬ್ಯಾಂಕ್ ಬಳಗ, ತಂಗಡಗಿ ಪಿಕೆಪಿಎಸ್ ಅಧ್ಯಕ್ಷ, ತಾಪಂ ಮಾಜಿ ಸದಸ್ಯ ಶ್ರೀಶೈಲ ಮರೋಳ, ರಾಜುಗೌಡ ಕೊಂಗಿ, ಮುತ್ತಿನಶೆಟ್ಟಿ ಗೂಳಿ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಸಂತೋಷ ಚವ್ಹಾಣ, ಯುವ ಮುಖಂಡ ಬಸವರಾಜ ಭಜಂತ್ರಿ, ಉದ್ಯಮಿ ಸಿ.ಪಿ.ಸಜ್ಜನ, ಬಸವೇಶ್ವರ ವಿದ್ಯಾಪ್ರಸಾರಕ ಸಂಘದ ಆಡಳಿತ ಮಂಡಳಿ ಸೇರಿ ಇತರರು ಶಾಸಕರನ್ನು ಸನ್ಮಾನಿಸಿ ಶುಭ ಕೋರಿದರು.
ಬಿಆರ್‌ಪಿ ಸಿದ್ದನಗೌಡ ಬಿಜ್ಜೂರ ಸ್ವಾಗತಿಸಿ, ನಿರ್ವಹಿಸಿದರು. ಖ್ಯಾತ ಗಾಯಕ ವೀರೇಶ ವಾಲಿ ತಂಡದವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಮುದ್ದೇಬಿಹಾಳ, ತಾಳಿಕೋಟೆ, ನಾಲತವಾಡ ಭಾಗದ ಅನೇಕ ಗಣ್ಯರು, ನಾಡಗೌಡರ ಅಭಿಮಾನಿಗಳು, ಕಾಂಗ್ರೆಸ್ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.