ಒಳಚರಂಡಿ ಕಾಮಗಾರಿ ಪರಿಶೀಲನೆಗೆ ಅಧಿಕಾರಿಗಳ ತಂಡ

MBL-6-2
Published on

ಮುದ್ದೇಬಿಹಾಳ: ಪಟ್ಟಣ ವ್ಯಾಪ್ತಿಯಲ್ಲಿ ಒಳಚರಂಡಿ ಕಾಮಗಾರಿ ಪರಿಶೀಲನೆಗೆ ಆಯಾ ವಾರ್ಡ್‌ಗಳ ಸದಸ್ಯರು ಹಾಗೂ ಅಧಿಕಾರಿಗಳ ತಂಡ ಭೇಟಿ ನೀಡಿ ಕಾಮಗಾರಿ ಪ್ರಗತಿ ಪರಿಶೀಲನೆ ನಡೆಸಲಿದೆ ಎಂದು ಜಲಮಂಡಳಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಬಿ.ಎಸ್. ಶ್ರೀನಿವಾಸ ತಿಳಿಸಿದರು.

ಪಟ್ಟಣದ ಪುರಸಭೆಗೆ ಮಂಗಳವಾರ ಭೇಟಿ ನೀಡಿದ್ದ ಜಲಮಂಡಳಿ ಅಧಿಕಾರಿಗಳು ಪುರಸಭೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ಕೆಲವೆಡೆ ನಾಗರಿಕರು ಬಾಕಿ ಉಳಿದಿರುವ ಕಾಮಗಾರಿಗೆ ಅಡ್ಡಿಪಡಿಸುತ್ತಿದ್ದು ಆ ಭಾಗದಲ್ಲಿ ಪೊಲೀಸರ ಗಮನಕ್ಕೆ ತಂದು ಕಾಮಗಾರಿ ಪೂರ್ಣಗೊಳಿಸಲಾಗುತ್ತದೆ ಎಂದು ಹೇಳಿದರು.

ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಎಂ.ಬಿ. ಮಾಡಗಿ ಮಾತನಾಡಿ, ಪಟ್ಟಣದಲ್ಲಿ ಯುಜಿಡಿ ಕಾಮಗಾರಿ ಪ್ರಗತಿ ಪರಿಶೀಲನೆಯನ್ನು ಇನ್ನೊಂದು ವಾರದಲ್ಲಿ ವಾರ್ಡ್‌ವಾರು ಭೇಟಿ ಮಾಡಿ ಎಲ್ಲೆಲ್ಲಿ ಸಮಸ್ಯೆ ಇದೆಯೋ ಅದನ್ನು ದಾಖಲಿಸಿಕೊಂಡು ತ್ವರಿತವಾಗಿ ಕೆಲಸ ಮಾಡಲು ಆದ್ಯತೆ ನೀಡುವುದಕ್ಕಾಗಿ ಆಯಾ ವಾಡ್‌ರ್ ಸದಸ್ಯರ ಜೊತೆಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ತಂಡ ವಾರ್ಡ್‌ಗಳಲ್ಲಿ ಸಂಚರಿಸಿ ನಾಗರಿಕರಿಂದ ಮಾಹಿತಿ ಸಂಗ್ರಹಿಸಲಾಗುವುದು ಎಂದು ಹೇಳಿದರು.

ಪುರಸಭೆ ಉಪಾಧ್ಯಕ್ಷೆ ಶಹಜಾದಬಿ ಹುಣಸಗಿ ಮಾತನಾಡಿ, ಪಟ್ಟಣದ ಕೆಲವು ವಾರ್ಡ್‌ಗಳಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಳಿಸಿಲ್ಲ. ಕೆಲವೆಡೆ ನಿರ್ಮಿಸಲಾದ ಚೇಂಬರ್‌ಗಳು ಒಡೆದಿವೆ ಎಂದು ಅಧಿಕಾರಿಗಳ ಗಮನಕ್ಕೆ ತಂದರು.
ಅದಕ್ಕೆ ಉತ್ತರಿಸಿದ ಸಹಾಯಕ ಅಭಿಯಂತರ ರಾಮರಾವ ರಾಠೋಡ ಎಲ್ಲೆಲ್ಲಿ ಸಮಸ್ಯೆ ಆಗಿದೆಯೋ ಸಿಬ್ಬಂದಿ ಕಳಿಸಿ ಪರಿಶೀಲನೆ ನಡೆಸಲಾಗುತ್ತದೆ. ಆದಷ್ಟು ಬೇಗ ಯುಜಿಡಿ ಕಾಮಗಾರಿ ಪೂರ್ಣಗೊಳಿಸಲಾಗುವುದು. ಈಗಾಗಲೇ ಮುದ್ನಾಳದ ವೆಟ್‌ವೆಲ್ ಕಾಮಗಾರಿ ಶೇ.60ರಷ್ಟು ಪೂರ್ಣಗೊಂಡಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net