ಬಸ್ ನಿಲ್ದಾಣ ಕಾಮಗಾರಿಗೆ ಅಡ್ಡಗಾಲು

MBL-29-1
Published on

ಮುದ್ದೇಬಿಹಾಳ: ತಾಲೂಕಿನ ನಾಲತವಾಡದಲ್ಲಿ ಬಸ್ ನಿಲ್ದಾಣ ಕಾಮಗಾರಿಗೆ ಮಾಜಿ ಶಾಸಕ ನಾಡಗೌಡರ ಸಂಬಂಧಿ, ನಾಲತವಾಡ ಪಪಂ ಮಾಜಿ ಅಧ್ಯಕ್ಷ ಪೃಥ್ವಿರಾಜ ನಾಡಗೌಡ ಅಡ್ಡಿಪಡಿಸುತ್ತಿದ್ದಾರೆ ಎಂದು ಬಿಜೆಪಿ ಹಿರಿಯ ಮುಖಂಡ ಎಂ.ಎಸ್. ಪಾಟೀಲ ಆರೋಪಿಸಿದ್ದಾರೆ.

ತಾಲೂಕಿನ ಕೇಸಾಪುರ ಹಾಗೂ ಆಲೂರ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಹಿನ್ನೆಲೆ ಆಲೂರದ ಮಾರುತೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದರು.

ನಾಲತವಾಡದಲ್ಲಿರುವ ಬಸ್ ನಿಲ್ದಾಣ ಹಾಳಾಗಿದೆ. ಬಸ್‌ಗಳು ಸಂಚರಿಸಲು, ಪ್ರಯಾಣಿಕರ ಓಡಾಟಕ್ಕೆ ತೊಂದರೆಯಾಗಿರುವುದನ್ನು ಗಮನದಲ್ಲಿರಿಸಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಅಂದಾಜು 3.50 ಕೋಟಿ ರೂ. ವೆಚ್ಚದಲ್ಲಿ ಬಸ್ ನಿಲ್ದಾಣದ ಕಾಮಗಾರಿಗೆ ಎರಡೂವರೆ ತಿಂಗಳ ಹಿಂದೆ ಭೂಮಿಪೂಜೆ ನೆರವೇರಿಸಿದ್ದಾರೆ. ಆದರೆ ಈಗ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಪೃಥ್ವಿರಾಜ ನಾಡಗೌಡ ಅದನ್ನು ಬಂದ್ ಮಾಡಿಸುತ್ತಿದ್ದಾರೆ. ಕೆಎಸ್‌ಆರ್‌ಟಿಸಿ ಇಂಜಿನಿಯರ್ ಅವರಿಗೆ ಬಸ್ ನಿಲ್ದಾಣ ಹೇಗೆ ಕಟ್ಟುತ್ತೀರಿ ನೋಡುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ. ಈ ಸಭೆಯಲ್ಲಿ ನಾವು(ಬಿಜೆಪಿ ನಾಯಕರು) ಹೇಳುತ್ತೇವೆ, ನಾಲತವಾಡದಲ್ಲಿ ಬಸ್ ನಿಲ್ದಾಣ ಮುಂದೆ ನಿಂತು ಕಟ್ಟಿಸಿ ತೋರಿಸುತ್ತೇವೆ ಎಂದು ಸವಾಲು ಹಾಕಿದರು.

ಇದೇ ವೇಳೆ ಆಲೂರಿನ ಕಾಂಗ್ರೆಸ್ ಮುಖಂಡರಿಗೆ ಬಹಿರಂಗ ಆಹ್ವಾನ ನೀಡಿದ ಎಂ.ಎಸ್. ಪಾಟೀಲ, ಅಭಿವೃದ್ಧಿ ಹರಿಕಾರರಾಗಿರುವ ಶಾಸಕ ನಡಹಳ್ಳಿ ಅವರಿಗೆ ಬೆಂಬಲಿಸಿ ನಾಡಗೌಡರನ್ನು ಬಿಡಿ ಎಂದು ಬಹಿರಂಗವಾಗಿ ಮನವಿ ಮಾಡಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಿರಾದಾರ ಕವಡಿಮಟ್ಟಿ, ಎಪಿಎಂಸಿ ಅಧ್ಯಕ್ಷ ರಾಮನಗೌಡ ಇಂಗಳಗಿ, ನಿರ್ದೇಶಕ ಪ್ರಭು ಡೇರೇದ, ಭೂ ನ್ಯಾಯ ಮಂಡಳಿ ಸದಸ್ಯ ಎಸ್.ಬಿ. ಚಲವಾದಿ, ಶಿವಶಂಕರಗೌಡ ಹಿರೇಗೌಡರ, ಕುಂಟಪ್ಪ ಗೂಳಿ, ಶ್ರೀನಿವಾಸ ಗೌಂಡಿ, ಯಲ್ಲಪ್ಪ ಚಲವಾದಿ, ಚನ್ನಪ್ಪ ವಿಜಯಕರ್, ಶಿವಕುಮಾರ ಹಿರೇಗೌಡರ, ಬಸು ಡೇರೇದ, ಶಿವು ಕನ್ನೊಳ್ಳಿ ಮತ್ತಿತರರಿದ್ದರು.

ಜನರ ಬಳಿ ಹೋಗಿ ಸಮಸ್ಯೆ ನೋಟ್ ಮಾಡಿಕೊಂಡ ಶಾಸಕ
ಕೇಸಾಪುರದಲ್ಲಿ ಭಾನುವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಆಗಮಿಸಿದ್ದ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಅವರೇ ಜನರ ಮಧ್ಯೆ ತೆರಳಿ ಪೆನ್ ಹಾಗೂ ಪೇಪರ್ ಹಿಡಿದುಕೊಂಡು ಅವರ ಸಮಸ್ಯೆ ಆಲಿಸಿ ಬರೆದುಕೊಂಡರು. ಅಂಗವಿಕಲ ಬಾಲಕನಿಗೆ ವೈಯಕ್ತಿಕವಾಗಿ ತ್ರಿಚಕ್ರ ಬೈಕ್ ನೀಡುವ ಭರವಸೆ ನೀಡಿದರಲ್ಲದೆ, ಮನೆ ಇಲ್ಲದ ವೃದ್ಧೆಗೆ ಮನೆ ಕೊಡಿಸುವುದಾಗಿ ಹೆಸರು ಬರೆದುಕೊಂಡರು. ಶಾಸಕರ ನಡೆ ಬಗ್ಗೆ ಜನರಿಂದ ಮೆಚ್ಚುಗೆ ವ್ಯಕ್ತವಾಯಿತು.

ಜತೆಯಾದ ಕಾಂಗ್ರೆಸ್ ಮುಖಂಡರು
ಆಲೂರದಲ್ಲಿ ಸಿಸಿ ರಸ್ತೆ ನಿರ್ಮಾಣದ ಕಾಮಗಾರಿ ಭೂಮಿಪೂಜೆ ನೆರವೇರಿಸುವ ವೇಳೆ ಕಾಂಗ್ರೆಸ್ ಮುಖಂಡರೂ ಶಾಸಕ ನಡಹಳ್ಳಿ ಅವರ ಜತೆಯಾಗಿದ್ದುದು ವಿಶೇಷವಾಗಿತ್ತು. ಅಭಿವೃದ್ಧಿ ಕೆಲಸಗಳಲ್ಲಿ ನಾವು ರಾಜಕಾರಣ ಮಾಡುವುದಿಲ್ಲ. ಆದರೆ, ನೀವು ಅಭಿವೃದ್ಧಿ ಕೆಲಸಗಳನ್ನು ಮಾಡಿ ತೋರಿಸುವಂತೆ ಕಾಂಗ್ರೆಸ್ ಮುಖಂಡರು ಬಿಜೆಪಿಯವರಿಗೆ ಸಲಹೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net