ಅತಿಕ್ರಮಣ ತೆರವಿಗೆ ಗ್ರಾಮಸ್ಥರ ಮನವಿ

MBL 9-2
Published on

ಮುದ್ದೇಬಿಹಾಳ: ತಾಲೂಕಿನ ಕಾಳಗಿ ಗ್ರಾಮದಲ್ಲಿ ರಸ್ತೆ ಅತಿಕ್ರಮಣವಾಗಿದ್ದು, ಅದನ್ನು ತೆರವುಗೊಳಿಸಿ ರಸ್ತೆ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿ ಗ್ರಾಮಸ್ಥರು ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.
ಕಾರ್ಯ ನಿಮಿತ್ತ ಪಟ್ಟಣದ ತಹಸೀಲ್ದಾರ್ ಕಚೇರಿಗೆ ಆಗಮಿಸಿದ್ದ ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಅವರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿ, ಗ್ರಾಮದ ಸರ್ಕಾರಿ ಆಸ್ಪತ್ರೆಯಿಂದ ಸರ್ಕಾರಿ ಪ್ರೌಢಶಾಲೆವರೆಗೆ ಈ ಮೊದಲು ರಸ್ತೆ ಇತ್ತು. ಹಳೇ ರಸ್ತೆ ಒಂದು ಕಿ.ಮೀ. ಇದ್ದು, ಈಗ ಆ ರಸ್ತೆ ಅತಿಕ್ರಮಣಗೊಂಡಿದೆ. ಅದನ್ನು ತೆರವುಗೊಳಿಸಿ ಸರ್ಕಾರಿ ಪ್ರೌಢಶಾಲೆಗೆ ಮಕ್ಕಳು ಹೋಗಲು ಹಾಗೂ ರೈತರು ಹೊಲಗಳಿಗೆ ಹೋಗಲು ಅನುಕೂಲ ಮಾಡಿಕೊಡಬೇಕು. ಸರ್ವೇ ನಂ. 171ರಲ್ಲಿ ಬರುವ ರಸ್ತೆ ಜಾಗದಲ್ಲಿ ಖಾಸಗಿ ವ್ಯಕ್ತಿಗಳು ಕಟ್ಟಡ, ಕಾಂಪೌಂಡ್‌ಗಳನ್ನು ಕಟ್ಟಿಕೊಂಡು ಅತಿಕ್ರಮಣ ಮಾಡಿಕೊಂಡಿದ್ದು, ಕೂಡಲೇ ಪ್ರೌಢಶಾಲೆಗೆ ಹೋಗುವ ರಸ್ತೆಯನ್ನು ನಿರ್ಮಾಣ ಮಾಡಿಕೊಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ತಾಳಿಕೋಟೆ ತಹಸೀಲ್ದಾರ್ ಅನಿಲಕುಮಾರ ಢವಳಗಿ ಇದ್ದರು. ಗ್ರಾಮಸ್ಥರಾದ ಬಸಪ್ಪ ಗೊಳಸಂಗಿ, ಪರಸಪ್ಪ ಅಂಬಿಗೇರ, ಬಸಪ್ಪ ಕುಂಬಾರ, ಮಾರುತಿ ಭಜಂತ್ರಿ, ರಾವುತಪ್ಪ ಮಾದರ, ಪ್ರಕಾಶ ಮಾದರ, ಚಂದ್ರಾಮಪ್ಪ ಬಳೂತಿ, ಶೇಖಪ್ಪ ಕುಂಬಾರ, ವಿಠ್ಠಪ ನಾಶಿ, ಮುತ್ತಣ್ಣ ಸಿಂಹಾಸನ, ಮಹಾಂತೇಶ ಸಜ್ಜನ, ಲಕ್ಷ್ಮಿಬಾಯಿ ಹಿರೇಮಠ, ಮಹಾದೇವಿ ಕಲ್ಮಠ, ಎಚ್.ಎಸ್. ಒಡೆಯರ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net