

ಮುದ್ದೇಬಿಹಾಳ: ಸ್ವಾತಂತ್ರೃ ಬಂದು 70 ವರ್ಷವಾದರೂ ನಮ್ಮೂರಿಗೆ ಬಸ್ ಬಂದಿಲ್ಲ. ಇನ್ನಾದರೂ ಅಧಿಕಾರಿಗಳು ಬಸ್ ಓಡಿಸಲು ಕ್ರಮ ಜರುಗಿಸಬೇಕು ಎಂದು ಶಿರೋಳ ಗ್ರಾಮಸ್ಥರು ಮನವಿ ಮಾಡಿದರು.ತಾಲೂಕಿನ ಶಿರೋಳ ಗ್ರಾಮದ ಬನಶಂಕರಿ ದೇವಸ್ಥಾನ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಅಳಲು ತೋಡಿಕೊಂಡರು.
ನಿತ್ಯವೂ ಶಿರೋಳದಿಂದ ಮುದ್ದೇಬಿಹಾಳ ಪಟ್ಟಣಕ್ಕೆ ನೂರಾರು ಜನರು ದುಡಿಯಲು ಹೋಗುತ್ತಾರೆ. ಶಾಲೆ ಮಕ್ಕಳು ಕಾಲೇಜುಗಳಿಗೆ ತೆರಳಲು ಅನನುಕೂಲವಾಗಿದೆ. ಪಟ್ಟಣದಿಂದ ನಾಲ್ಕು ಕಿ.ಮೀ. ಅಂತರದಲ್ಲಿರುವ ಊರಿಗೆ ಬಸ್ ಸೌಕರ್ಯ ಇಲ್ಲ ಎಂದು ಹೇಳಿದರು. ಇದಕ್ಕೆ ಉತ್ತರಿಸಿದ ತಹಸೀಲ್ದಾರ್ ಬಿ.ಎಸ್.ಕಡಕಭಾವಿ ಅವರು, ಸಂಬಂಧಿಸಿದ ಸಾರಿಗೆ ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿ, ಸೋಮವಾರದಿಂದ ಬಸ್ ಓಡಿಸುವ ಕಾರ್ಯ ಮಾಡಲಾಗುವುದು ಎಂದರು.
ಗ್ರಾಮದ ಎಲ್ಲೆಂದರಲ್ಲಿ ನೀರು ನಿಂತು ಕೊಳಚೆಯಾಗಿದ್ದನ್ನು ಸ್ವಚ್ಛಗೊಳಿಸಬೇಕು. ಚರಂಡಿ ನಿರ್ಮಿಸಿ ನೀರು ನಿಲ್ಲದಂತೆ ಕ್ರಮ ಜರುಗಿಸಬೇಕು. ಶವ ಸಂಸ್ಕಾರ ಮಾಡಲು ಮುಸ್ಲಿಂ ಸಮಾಜಕ್ಕೆ ಸೂಕ್ತ ಜಾಗ ಒದಗಿಸಬೇಕು. ಗ್ರಾಮದ ನಾಲ್ಕು ಜನರ ಹೆಬ್ಬೆರಳುಗಳು ಆಧಾರ್ ಕಾರ್ಡ್ ಸಲುವಾಗಿ ಕಂಪ್ಯೂಟರ್ ಯಂತ್ರದಲ್ಲಿ ದಾಖಲೀಕರಣ ಆಗುತ್ತಿಲ್ಲ. ಅವರ ಆಧಾರ್ ಕಾರ್ಡ್ ಮಾಡಿಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ಪಟ್ಟಣದಿಂದ ಊರಿಗೆ ಬರುವ ರಸ್ತೆ ಗ್ರಾಮ ವ್ಯಾಪ್ತಿಯಲ್ಲಿ ಅತಿಕ್ರಮಣವಾಗಿದೆ. ಅದನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆ ತಹಸೀಲ್ದಾರ್ ಕಡಕಭಾವಿ ಪಂಚಾಯಿತಿ ಅಧಿಕಾರಿಗೆ ಸೂಚನೆ ನೀಡಿದರು.
ಒಟ್ಟು 50ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಲಾಯಿತು. ಐವರಿಗೆ ಸ್ಥಳದಲ್ಲೇ ಪಿಂಚಣಿ ಆದೇಶ ಪತ್ರ ವಿತರಿಸಲಾಯಿತು. ತಾಪಂ ಇಒ ಎಸ್.ವೈ.ಹೊಕ್ರಾಣಿ, ಗ್ರಾಪಂ ಅಧ್ಯಕ್ಷ ಸಿದ್ದರಾಮಯ್ಯ ಗುರುವಿನ, ಸದಸ್ಯ ದ್ಯಾವಪ್ಪ ಹುಣಶ್ಯಾಳ, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು. ಎಂ.ಸಿ.ನದಾಫ್ ಪ್ರಾರ್ಥಿಸಿದರು. ಪಿಡಿಒ ಪಿ.ಎಸ್.ಕಸನಕ್ಕಿ ಸ್ವಾಗತಿಸಿದರು. ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ರಿಯಾಜ್ ನಾಯ್ಕೋಡಿ ನಿರೂಪಿಸಿದರು.