

ಮುದ್ದೇಬಿಹಾಳ: ಪಟ್ಟಣದ ಪುರಸಭೆ ಸ್ವಚ್ಛತಾ ಸಿಬ್ಬಂದಿ ಬೇಜವಾಬ್ದಾರಿತನಕ್ಕೆ ಬೇಸತ್ತು 16ನೇ ವಾರ್ಡ್‌ನ ಸದಸ್ಯೆ ಚಾಂದಬಿ ನಬೀಶಾ ಮಕಾನದಾರ ಅವರ ಪುತ್ರ ಅಬ್ದುಲ್‌ಮಜೀದ ಮಕಾನದಾರ ಖುದ್ದು ಚರಂಡಿ ಕೊಳಚೆಯನ್ನು ಸೋಮವಾರ ಬೇರೆಡೆ ಸಾಗಿಸಿದ್ದಾರೆ.
ವಾರ್ಡ್‌ನ ಹೊರಪೇಟೆ ಬಡಾವಣೆಯಲ್ಲಿ ವಾರದ ಹಿಂದೆ ಸ್ವಚ್ಛತಾ ಕಾರ್ಮಿಕರು ಚರಂಡಿ ಸ್ವಚ್ಛಗೊಳಿಸಿ ತ್ಯಾಜ್ಯವನ್ನು ಚರಂಡಿ ಪಕ್ಕದಲ್ಲೇ ಹಾಕಿ ಹೋಗಿದ್ದರು. ಇದರಿಂದ ಸಾರ್ವಜನಿಕರು, ವಾಹನ ಸವಾರರು, ಅಕ್ಕಪಕ್ಕದ ನಿವಾಸಿಗಳಿಗೂ ಸಮಸ್ಯೆ ಆಗತೊಡಗಿತ್ತು. ಸಮಸ್ಯೆ ಕುರಿತು ವಾರ್ಡ್ ಸದಸ್ಯೆಯ ಗಮನಕ್ಕೆ ತಂದು ತ್ಯಾಜ್ಯ ಸಾಗಿಸುವಂತೆ ವ್ಯವಸ್ಥೆ ಮಾಡಲು ಜನರು ತಿಳಿಸಿದ್ದರು.
ವಾರ್ಡ್ ಸದಸ್ಯೆ, ಅವರ ಪುತ್ರ ಇಬ್ಬರೂ ಪುರಸಭೆಯಲ್ಲಿ ಸ್ವಚ್ಛತೆಯ ಉಸ್ತುವಾರಿ ನೋಡಿಕೊಳ್ಳುವ ಸಿಬ್ಬಂದಿಗೆ ಹಲವು ಬಾರಿ ಕರೆ ಮಾಡಿ ತ್ಯಾಜ್ಯವನ್ನು ಸಾಗಿಸುವಂತೆ ಕೋರಿದ್ದರೂ ಸ್ಪಂದನೆ ಸಿಕ್ಕಿರಲಿಲ್ಲ. ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ಅವರ ಗಮನಕ್ಕೆ ತಂದರೂ ಪ್ರಯೋಜನ ಆಗಿರಲಿಲ್ಲ. ಇದರಿಂದ ಬೇಸತ್ತು ಬಡಾವಣೆಯ ನಿವಾಸಿಗಳ ಬೇಡಿಕೆಗೆ ಸ್ಪಂದಿಸಲು ಅಬ್ದುಲ್ ಮಜೀದ ಅವರು ಸ್ವತಃ ತಾವೇ ಸಲಿಕೆ, ಬುಟ್ಟಿ ತೆಗೆದುಕೊಂಡು ಚರಂಡಿಯ ತ್ಯಾಜ್ಯವನ್ನು ಒಂದು ಕಡೆ ಗುಡ್ಡೆ ಹಾಕಿ ಬೇರೆಡೆ ಸಾಗಿಸಿದರು.
ಅಬ್ದುಲ್ ಮಜೀದ ಸುದ್ದಿಗಾರರೊಂದಿಗೆ ಮಾತನಾಡಿ, ಪುರಸಭೆಯಲ್ಲಿ ಆಡಳಿತ ವ್ಯವಸ್ಥೆ ಹದಗೆಟ್ಟಿದೆ. ಸ್ವಚ್ಛತಾ ಕಾರ್ಮಿಕರು ವಾರ್ಡ್ ಸದಸ್ಯರಿಗೆ ಮತ್ತು ಸಾರ್ವಜನಿಕರಿಗೆ ಸ್ಪಂದಿಸುತ್ತಿಲ್ಲ. ಹಲವು ಬಾರಿ ಕರೆ ಮಾಡಿ ತ್ಯಾಜ್ಯ ಸಾಗಿಸುವಂತೆ ತಿಳಿಸಿದರೂ ನಿರ್ಲಕ್ಷೃ ತೋರಿದ್ದರಿಂದ ಬೇಸತ್ತು ನಾನೇ ಅವರು ಮಾಡಬೇಕಿದ್ದ ಕೆಲಸ ಮಾಡಿದ್ದೇನೆ.
ಈ ಕುರಿತು ವಿಜಯಪುರದ ಪುರಸಭೆಗಳ ಮೇಲುಸ್ತುವಾರಿ ಹೊಂದಿರುವ ಯೋಜನಾ ನಿರ್ದೇಶಕರು, ಜಿಲ್ಲಾಧಿಕಾರಿ, ಪೌರಾಡಳಿತ ಸಚಿವರಿಗೆ ದೂರು ಸಲ್ಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮನವಿ ಮಾಡಿದ್ದೇನೆ. ಇನ್ನು ಮುಂದೆ ಸುಧಾರಣೆ ಕಂಡು ಬರದಿದ್ದರೆ ವಾರ್ಡ್‌ನ ಜನರೊಂದಿಗೆ ಪುರಸಭೆ ಎದುರು ಧರಣಿ ನಡೆಸಲಾಗುವುದು. ಪಟ್ಟಣದ ಸ್ವಚ್ಛತೆಯಲ್ಲಿ ನಿರ್ಲಕ್ಷೃ ತೋರಿಸುವ ಸಿಬ್ಬಂದಿಯನ್ನು ಸೇವೆಯಿಂದ ಅಮಾನತುಗೊಳಿಸುವಂತೆ ಆಗ್ರಹಿಸಲಾಗುವುದು ಎಂದು ಎಚ್ಚರಿಸಿದರು.
ಮುಖ್ಯಾಧಿಕಾರಿ ಪ್ರತಿಕ್ರಿಯೆ: ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ಮಾತನಾಡಿ, ಸ್ವಚ್ಛತಾ ಕಾರ್ಮಿಕರು ಚರಂಡಿ ಸ್ವಚ್ಛಗೊಳಿಸಿ ತ್ಯಾಜ್ಯವನ್ನು ಚರಂಡಿ ಪಕ್ಕದಲ್ಲಿ ಹಾಕಿ ನಂತರ ವಾಹನದ ಮೂಲಕ ಸಾಗಿಸಬೇಕಿತ್ತು. ಆದರೆ ವಾಹನ ಅಲ್ಲಿ ಹೋಗದ ಕಾರಣ ಸಮಸ್ಯೆ ಆಗಿದೆ. ದೀಪಾವಳಿ ಹಬ್ಬದ ಕಾರಣ ಪೌರ ಕಾರ್ಮಿಕರು, ಪುರಸಭೆ ವಾಹನಗಳ ಸಮೇತ ಬಜಾರ್ ಸೇರಿ ಪ್ರಮುಖ ಪ್ರದೇಶಗಳಲ್ಲಿ ಸ್ವಚ್ಛತೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಆ ವಾರ್ಡ್‌ನಲ್ಲಿ ಸಮಸ್ಯೆ ಆಗಿರಬಹುದು. ಕೂಡಲೇ ಇದನ್ನು ಸರಿಪಡಿಸಲು ಕ್ರಮ ಕೈಗೊಳ್ಳುತ್ತೇನೆ. ಅಬ್ದುಲ್ ಮಜೀದ ಅವರಿಗೆ ಕಾಲಾವಕಾಶ ಕೇಳಿದರೂ ಅವರು ಹೀಗೆ ಮಾಡಿದ್ದಾರೆ ಎಂದು ತಿಳಿಸಿದರು.