12 ಕೋಟಿ ರೂ.ವೆಚ್ಚದಲ್ಲಿ ಗಾರ್ಡನ್ ಅಭಿವೃದ್ಧಿಗೆ ಕ್ರಿಯಾಯೋಜನೆ

MBL 14-5
Published on

ಮುದ್ದೇಬಿಹಾಳ: ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ 100 ಗಾರ್ಡನ್‌ಗಳಿದ್ದು, ಅದರಲ್ಲಿ 45 ಗಾರ್ಡನ್‌ಗಳನ್ನು ಕೆಬಿಜೆಎನ್‌ಎಲ್‌ನ ಅಂದಾಜು 12 ಕೋಟಿ ರೂ. ವಿಶೇಷ ಅನುದಾನ ಅಡಿ ಅಭಿವೃದ್ಧಿಗೊಳಿಸಲಾಗುತ್ತದೆ ಎಂದು ಆಹಾರ ಪೂರೈಕೆ ನಿಗಮದ ಅಧ್ಯಕ್ಷ, ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಹೇಳಿದರು.
ಪಟ್ಟಣದ ದಾಸೋಹ ನಿಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮುದ್ದೇಬಿಹಾಳ ಹಾಗೂ ತಾಳಿಕೋಟೆ ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.
ಕೆಲ ಉದ್ಯಾನಗಳಲ್ಲಿ ಅನಧಿಕೃತ ಕಟ್ಟಡಗಳನ್ನು ನಿರ್ಮಿಸಿಕೊಳ್ಳಲಾಗಿದೆ. ಅವುಗಳನ್ನು ತಕ್ಷಣದಲ್ಲೇ ತೆರವುಗೊಳಿಸಿ ಉದ್ಯಾನ ಅಭಿವೃದ್ಧಿಗೊಳಿಸಬೇಕು ಎಂದ ಅವರು, ಪಿಡಬ್ಲೂೃಡಿ ಎನ್‌ಒಸಿ ಪಡೆಯದೆ ಕಟ್ಟಡ ನಿರ್ಮಾಣಕ್ಕೆ ಅನುಮತಿ ಕೊಡಬೇಡಿ ಎಂದು ಪುರಸಭೆ ಅಧಿಕಾರಿಗಳಿಗೆ ಸೂಚಿಸಿದರು.
ಡಿಯುಡಿಸಿ ಎಇಇ ಆರ್.ಎಂ. ಜುಮನಾಳ ಮಾತನಾಡಿ, ಅನಧಿಕೃತ ಲೇಔಟ್ ಹಾಗೂ ಗಾರ್ಡನ್ ಜಾಗಗಳ ಅತಿಕ್ರಮಣಗಳ ಬಗ್ಗೆ ಗಮನವಹಿಸಿ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳು ಇತ್ತೀಚೆಗೆ ನಡೆದ ಸಭೆಯಲ್ಲಿ ಸೂಚನೆ ನೀಡಿದ್ದಾರೆ. ಅಲ್ಲದೆ, ಜಿಲ್ಲಾಡಳಿತದಿಂದ ಬೇಕಾದ ಸಹಕಾರ ನೀಡುವುದಾಗಿಯೂ ತಿಳಿಸಿದ್ದಾರೆ ಎಂದು ಹೇಳಿದರು.
ಸದ್ಯ ತಾಲೂಕಿನಲ್ಲಿ ಭಾರಿ ಮಳೆಯಿಂದ ಹಾನಿಗೀಡಾದ ಸ್ಥಳಗಳಿಗೆ ಕಂದಾಯ ಇಲಾಖೆ ಅಧಿಕಾರಿಗಳು, ಪಿಡಿಒಗಳು ಭೇಟಿ ನೀಡಿ ನೈಜ ಸಮೀಕ್ಷೆ ನಡೆಸಿ ತಕ್ಷಣ ವರದಿ ಸಲ್ಲಿಸಬೇಕು. ಹಾನಿಗೊಳಗಾದವರಿಗೆ ಸರ್ಕಾರದಿಂದ ಪರಿಹಾರ ಕಲ್ಪಿಸಲಾಗುವುದು ಎಂದು ಶಾಸಕರು ಹೇಳಿದರು.
ಸ್ಮಶಾನ ಜಾಗಗಳನ್ನು ಗುರುತಿಸುವುದು, ಸರ್ಕಾರಿ ಜಾಗ ಅತಿಕ್ರಮಣ ತಡೆಗಟ್ಟುವುದು, ವಿದ್ಯುತ್ ಕಂಬಗಳ ಅಳವಡಿಕೆ, ಮೀನುಗಾರಿಕೆ ಹಾಗೂ ಇನ್ನಿತರ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದರು.
ತಹಸೀಲ್ದಾರ್ ಅನೀಲಕುಮಾರ ಢವಳಗಿ, ತಾಪಂ ಇಒ ಶಶಿಕಾಂತ ಶಿವಪುರೆ, ಹೆಸ್ಕಾಂ ಎಇಇ ರಾಜಶೇಖರ ಹಾದಿಮನಿ, ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ರಾಜೇಶ್ವರಿ ನಾಡಗೌಡ, ಪಿಡಬ್ಲೂೃಡಿ ಇಲಾಖೆಯ ಎಇಇ ಎಸ್.ಎಂ. ಹುಂಡೇಕಾರ, ಸಿಡಿಪಿಒ ಸಾವಿತ್ರಿ ಗುಗ್ಗರಿ, ಬಿ.ಎಸ್. ಲಮಾಣಿ, ವಿನೋದ ನಾಯಕ, ಎಂ.ಎಸ್. ತೆಗ್ಗಿನಮಠ, ಆರ್.ಎಂ.ದೊಡ್ಡಮನಿ, ಅಲ್ಲಾಭಕ್ಷ ಬಾಗವಾನ, ಪುರಸಭೆ ಕಂದಾಯಾಧಿಕಾರಿ ಎಂ.ಬಿ. ಮಾಡಗಿ ಮೊದಲಾದವರು ಇದ್ದರು.

ಸರ್ಕಾರಿ ಕಟ್ಟಡಗಳ ಕುರಿತು ವರದಿ ಸಲ್ಲಿಸಿ

ಪಟ್ಟಣದ ವ್ಯಾಪ್ತಿಯಲ್ಲಿ ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿರುವ ವಿವಿಧ ಇಲಾಖೆಗಳು ಹಾಗೂ ಖಾಲಿ ಇರುವ ಸರ್ಕಾರಿ ಕಟ್ಟಡಗಳ ಕುರಿತು ಮಾಹಿತಿ ಒದಗಿಸುವಂತೆ ಅಧಿಕಾರಿಗಳಿಗೆ ಶಾಸಕ ನಡಹಳ್ಳಿ ಸೂಚಿಸಿದರು. ಶಿಥಿಲಾವಸ್ಥೆಯಲ್ಲಿರುವ ಖಾಲಿ ಕಟ್ಟಡಗಳನ್ನು ದುರಸ್ತಿ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಿದ್ಧಪಡಿಸಿ ಸಲ್ಲಿಸುವಂತೆ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net